ಹುಬ್ಬಳ್ಳಿ: ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ದಿನವಾದ ಸೋಮವಾರ ನಗರದ ವಿವಿಧ ಮಠಗಳಲ್ಲಿ ರಥೋತ್ಸವ, ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ಭಕ್ತರು ರಾಯರ ನಾಮ ಸ್ಮರಣೆ ಮಾಡಿ ಪುನೀತರಾದರು. ವಿವಿಧ ಮಠಗಳಲ್ಲಿ ವಿದ್ಯುದ್ದೀಪಾಲಂಕಾರ ಭಕ್ತರ ಸೆಳೆಯಿತು.
ಭವಾನಿ ನಗರದ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಾವಿರಾರು ಭಕ್ತರು ರಾಯರ ಅಲಂಕೃತ ಬೃಂದಾವನದ ದರ್ಶನ ಪಡೆದರು. ಪ್ರಹ್ಲಾದ ರಾಜರಿಗೆ ಕನಕಾಭಿಷೇಕ ಸೇವೆ ಸಲ್ಲಿಸಿದರು.
ವಿಚಾರಣಾಕರ್ತ ಎ.ಸಿ. ಗೋಪಾಲ್, ವ್ಯವಸ್ಥಾಪಕ ವೇಣುಗೋಪಾಲ್, ಅರ್ಚಕರಾದ ಗುರುರಾಜ ಆಚಾರ್ಯ ಸಾಮಗ, ನಾರಾಯಣ, ಬಿಂದುಮಾಧವ ಪುರೋಹಿತ, ಮನೋಹರ ಪರ್ವತಿ, ಘಟ್ಟು ಆಚಾರ್ಯ ನೇತೃತ್ವ ವಹಿಸಿದ್ದರು.
ರೇಣುಕಾನಗರದ ಮಠದಲ್ಲಿ ಸುಪ್ರಭಾತ, ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ರಥೋತ್ಸವ, ಬ್ರಾಹ್ಮಣರ ಅಲಂಕಾರ ಪೂಜೆ, ಸಂಜೆ ಅಷ್ಟಾವಧಾನ, ತೊಟ್ಟಿಲು ಪೂಜೆ, ಮಹಾಮಂಗಳಾರತಿ, ನರ್ತನ ಸೇವೆ ನೆರವೇರಿತು.
ಶಾಂತಿ ಕಾಲೊನಿಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಪಲ್ಲಕ್ಕಿ ಸೇವೆ, ನಗರ ಸಂಕೀರ್ತನೆ, ತಾರತಮ್ಯ ಭಜನೆ, ದಾಸವಾಣಿ, ಉಪನ್ಯಾಸ ನಡೆಯಿತು.
ಪಂಡಿತ ವಾಸುದೇವಾಚಾರ್ಯ ಗಲಗಲಿ, ಆರಾಧನೆ ಸೇವಾ ಸಮಿತಿ ಅಧ್ಯಕ್ಷ ವಿಷ್ಣುತೀರ್ಥ ಕಲ್ಲೂರ್ಕರ್, ಉಪಾಧ್ಯಕ್ಷ ಅರುಣ ಉರಣಕರ ಕಾಮತ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕುಲಕರ್ಣಿ, ರವಿ ಆಚಾರ್ಯ ಮತ್ತಿಹಳ್ಳಿ, ವೆಂಕಟೇಶ ಆಚಾರ್ಯ ಜಹಾಗೀರದಾರ, ಎಸ್.ಬಿ. ಮಳಗಿ, ಕೃಷ್ಣ ಜೋಶಿ, ಅನಂತ್ ಗಿಣಿಗೇರಿ, ಆನಂದ ಜೋಶಿ ಪಾಲ್ಗೊಂಡಿದ್ದರು.
ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣಮಂಟಪ ರಾಯರ ಮಠದಲ್ಲಿ ರಾಘವೇಂದ್ರ ಹೊಸಳ್ಳಿ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಜರುಗಿತು. ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ, ಪ್ರಧಾನ ಕಾರ್ಯದರ್ಶಿ ವಾದಿರಾಜ, ಉಪಾಧ್ಯಕ್ಷರಾದ ಅನಂತರಾಜ್ ಭಟ್ಟ, ಶ್ರೀಕಾಂತ ಕೆಮ್ತೂರು, ಕೃಷ್ಣರಾಜ ಕೆಮ್ತೂರು, ರಾಘವೇಂದ್ರ ಎಡೆನೀರು, ಅನಂತ ಕೃಷ್ಣ ಐತಾಳ ಪಾಲ್ಗೊಂಡಿದ್ದರು.
ಕುಬೇರ ಪುರಂ ರಾಯರ ಮಠ, ತೊರವಿಗಲ್ಲಿ ರಾಯರ ಮಠಗಳಲ್ಲಿಯೂ ಭಕ್ತರು ಸೇವೆ ಸಲ್ಲಿಸಿದರು.
ದಾಸವಾಣಿ ಇಂದು
ಹುಬ್ಬಳ್ಳಿಯ ಶಕ್ತಿ ಕಾಲೊನಿಯ ಮೃತ್ಯುಂಜಯ ನಗರದಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ಆರಾಧನೆ ಅಂಗವಾಗಿ ಆ.12ರಂದು ಸಂಜೆ 7 ಗಂಟೆಗೆ ದಾಸವಾಣಿ ಕಾರ್ಯಕ್ರಮ ಆಯೋಜಿಸಲಾಗಿದೆ. ‘ಉತ್ತರಾರಾಧನಾ ಮಹೋತ್ಸವದ ಅಂಗವಾಗಿ ಗಾಯಕ ಈಶ್ವರಪ್ಪ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹಾರ್ಮೋನಿಯಂ ಸಾಥಿಯಾಗಿ ವಿಜಯಕುಮಾರ್ ಅರ್ಕಸಾಲಿ ತಬಲಾ ಸಾಥಿಯಾಗಿ ರಾಘವೇಂದ್ರ ನಾಕೋಡ್ ಮತ್ತು ತಾಳದಲ್ಲಿ ಮನೋಹರ್ ಜೋಶಿ ಹಾಗೂ ಮೌನೇಶ್ ಬಡಿಗೇರ್ ನೆರವು ನೀಡಲಿದ್ದಾರೆ’ ಎಂದು ಮಠದ ಧರ್ಮದರ್ಶಿ ಗೋವಿಂದ ಆಚಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.