ಧಾರವಾಡ: ಜಿಲ್ಲೆಯಲ್ಗಿ ಮಳೆಯಾಗುತ್ಲಿದೆ. ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿದ್ದು ಜನರಿಗೆ ಸ್ಪಂದಿಸಬೇಕು. ನಿರ್ಲಕ್ಷ್ಯ ವಹಿಸಿದರೆ, ಜೀವ ಹಾನಿಯಾದರೆ ಆಯಾ ಅಧಿಕಾರಿಯನ್ನು ಹೊಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮಳೆ ಹಾನಿ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಸಭೆಯಲ್ಲಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಮಸ್ಯೆಗಳಿದ್ದರೆ, ಸ್ಥಳ ಪರಿಶೀಲನೆ ನಡೆಸಬೇಕು. ಸಮಸ್ಯೆ ಪರಿಹರಿಸಬೇಕು. ಮಳೆಗಾಲ ಮುಗಿಯುವವರೆಗೂ ಕೇಂದ್ರ ಸ್ಥಾನ ತೊರೆಯಬಾರದು. 24X7 ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಶೇ 67 ಮುಂಗಾರು ಬಿತ್ತನೆಯಾಗಿದೆ. ನವಲಗುಂದದಲ್ಲಿ ಶೇ 75 ಬಿತ್ತನೆಯಾಗಿದ್ದು, ಬೆಣ್ಣಿ ಹಳ್ಳದ ಪಕ್ಕದ ಹೊಲಗಳಲ್ಲಿ ಪ್ರವಾಹದಿಂದ ಬೆಳೆ ಹಾನಿಯಾಗಿದೆ. ಬಿತ್ತನೆ ಬೀಜ ಹಾನಿ ಪರಿಶೀಲಿಸಿ ಹಾಗೂ ರೈತ ಮುಖಂಡರೊಂದಿಗೆ ಚರ್ಚಿಸಿ ಮತ್ತೆ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರಿಗೆ ತಿಳಿಸಿದರು.
ಧಾರವಾಡ 32, ಹುಬ್ಬಳ್ಳಿ, 11, ಕಲಘಟಗಿ 18, ಕುಂದಗೋಳ 29 ನವಲಗುಂದ 23 ಸಹಿತ ಜಿಲ್ಲೆಯಲ್ಲಿ 113 ರಸ್ತೆಗಳು ಮಳೆಯಿಂದ ಹಾಳಾಗಿವೆ. ಕೆಲವೊಂದು ಹಳ್ಳಿಗಳ ಮಾರ್ಗವೂ ಸ್ಥಗಿತವಾಗಿದೆ. ಬಸ್ಸುಗಳ ಸಂಚಾರ ನಿಂತಿರುವುದರಿಂದ ಅದನ್ನು ತುರ್ತಾಗಿ ಸರಿಪಡಿಸಬೇಕು ಎಂದು ಲೋಕೋಪಯೋಗಿ ಅಧಿಕಾರಿಗಳಿಗೆ ತಿಳಿಸಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮ್ಮದ್ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಹಳ್ಳಿಗಳ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ಜನರೊಂದಿಗೆ ಇದ್ದು ಅವರ ಸಂಕಷ್ಟಗಳನ್ನು ಆಲಿಸಬೇಕು ಎಂದು ತಿಳಿಸಿದರು.
ಶಾಸಕ ಎನ್.ಎಚ್.ಕೋನರೆಡ್ಡಿ ಮಾತನಾಡಿ, ನವಲಗುಂದ ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಗಿದ್ದು, ಬೇರೆ ಜಿಲ್ಲೆಗಳಿಂದ, ತಾಲ್ಲೂಕುಗಳಿಂದ ನೀರು ಹರಿದು ಬರುತ್ತಿರುವುದರಿಂದ ಪ್ರವಾಹವು ಉಂಟಾಗುತ್ತಿದೆ. ಇದರಿಂದ ರಸ್ತೆಗಳು, ಸೇತುವೆಗಳು, ಮನೆಗಳು, ಬೆಳೆ ಹಾನಿ ಆಗುತ್ತಿರುವುದರಿಂದ ಅದನ್ನು ಸರಿಪಡಿಸುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ದಿವ್ಯಾ ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಭಾರಿ ಮಳೆಯಾದ ಕಾರಣ ಪ್ರತಿಯೊಬ್ಬ ಅಧಿಕಾರಿಯು ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿ ಇರುವ ಸಮಸ್ಯೆಗಳ ಬಗ್ಗೆ ಊರಿನ ಮುಖಂಡರೊಂದಿಗೆ ಚರ್ಚಿಸಿ, ಹಾಳಾಗಿರುವ ರಸ್ತೆಗಳ ಬಗ್ಗೆ ಮತ್ತು ಶಾಲೆಗಳ ಬಗ್ಗೆ, ಕುಡಿಯುವ ನೀರಿಗಾಗಿ ಆದ ತೊದರೆಗಳ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಯೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್, ಪ್ರೊಬೇಷನರಿ ಐಎಎಸ್ ಅಧಿಕಾರಿ ರೀತಿಕಾ ವರ್ಮಾ, ಡಿಸಿಪಿ ಮಹಾನಿಂಗ್ ನಂದಗಾಂವಿ ಇದ್ದರು.
ಹುಬ್ಬಳ್ಳಿ–ಧಾರವಾಡ ಪಾಲಿಕೆಯಲ್ಲಿ ಎರಡು ಸಾವಿರ ಪೌರಕಾರ್ಮಿಕರು ಇದ್ದಾರೆ. ಒಬ್ಬರಿಗೆ ಐದು ಮೀಟರ್ ರಸ್ತೆ ಸ್ವಚ್ಛತೆ ವಹಿಸಿದರೆ ನಿತ್ಯ 10 ಕಿ.ಮೀ ಸ್ವಚ್ಛಗೊಳಿಸಬಹುದು. ನಗರ ಸ್ವಚ್ಛತೆ ನಿಟ್ಟಿನಲ್ಲಿ ‘ರೋಡ್ ಮ್ಯಾಪ್’ ಸಿದ್ದಪಡಿಸಬೇಕುಸಂತೋಷ ಲಾಡ್, ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.