ADVERTISEMENT

ಧಾರವಾಡ | ತಗ್ಗಿದ ಮಳೆ ರಭಸ; ರೈತರಲ್ಲಿ ಮೂಡಿದ ಆತಂಕ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 5:48 IST
Last Updated 13 ಜುಲೈ 2025, 5:48 IST
ನವಲಗುಂದ ತಾಲ್ಲೂಕಿನಲ್ಲಿ ಮಳೆಯ ಕೊರತೆ ನಡುವೆಯೂ ರೈತರು ಹೆಸರು ಬೆಳೆಗೆ ಎಡೆ ಹೊಡೆದರು
ನವಲಗುಂದ ತಾಲ್ಲೂಕಿನಲ್ಲಿ ಮಳೆಯ ಕೊರತೆ ನಡುವೆಯೂ ರೈತರು ಹೆಸರು ಬೆಳೆಗೆ ಎಡೆ ಹೊಡೆದರು   

ನವಲಗುಂದ: ತಾಲ್ಲೂಕಿನಾದ್ಯಂತ ಸಮೃದ್ದ ಮಳೆ ಬೆಳೆ ಬರುವ ನಿರೀಕ್ಷೆಯಲ್ಲಿದ್ದ ರೈತರಿಗೆ ಆತಂಕ ಶುರುವಾಗಿದೆ. ಭಾರಿ ಗಾಳಿಗೆ ಜಿಟಿ ಜಿಟಿ ಮಳೆ ಹಾರಿ ಹೋಗಿದ್ದು, ಕಳೆದ ಒಂದು ತಿಂಗಳಿಂದ ಸಮರ್ಪಕ ಮಳೆಯಾಗಿಲ್ಲ. ಇದರಿಂದ ರೈತರು  ಆತಂಕಗೊಂಡಿದ್ದಾರೆ. 

ದಟ್ಟವಾದ ಮೋಡ ಕವಿದರೂ ಮಳೆಯಾಗುತ್ತಿಲ್ಲ, ಭಾರಿ ಗಾಳಿಗೆ ಮೋಡಗಳು ಬೇರೆಡೆ ಚಲಿಸಿ ಹೋಗುತ್ತಿವೆ. ರೈತರು ಮೋಡಗಳತ್ತ ಮುಖ ಮಾಡಿ ಮಳೆಗಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ತಿಂಗಳ ಹಿಂದೆ ಅತಿವೃಷ್ಟಿ ಮಳೆಗೆ ವಿವಿಧ ಬೆಳೆಗಳು ಹಾನಿಯಾಗಿ, ಅಲ್ಪ ಸ್ವಲ್ಪ ಉಳಿದುಕೊಂಡಿದ್ದವು.

ಹೆಸರು ಬೆಳೆ ಈಗ ತೇವಾಂಶ ಕೊರತೆಯಿಂದ ಹಸಿರು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಈರುಳ್ಳಿ ಚಿಗುರೊಡೆದಿಲ್ಲ.  ಬಿತ್ತಿದ ಗೋವಿನಜೋಳ ಮೊಳಕೆಯಲ್ಲಿಯೇ ಕಮರುತ್ತಿವೆ. ಕೆಲವು ರೈತರು ಭಾರಿ ಮಳೆಯಿಂದ ಕುಂಠಿತಗೊಂಡಿದ್ದ ಹೆಸರು ಬೆಳೆಯನ್ನು ಹರಗಿ ಗೋವಿನಜೋಳ ಬಿತ್ತನೆ ಮಾಡಿದ್ದರು, ಈಗ ತೇವಾಂಶ ಕೊರತೆಯಿಂದ ಬಿತ್ತಿದ ಗೋವಿನಜೋಳ ಹುಟ್ಟದೆ ಇದ್ದರಿಂದ ಮತ್ತೆ ಹರಗಿ, ಬಿಟಿ ಹತ್ತಿಯ ಮೊರೆ ಹೋಗುವಂತಾಗಿದೆ.

ADVERTISEMENT

ಕಳೆದ ವರ್ಷ ಮುಂಗಾರು ಮಳೆಯಿಂದ ಹೆಸರು, ಗೋವಿನಜೋಳ ಅಲ್ಪಸ್ವಲ್ಪ ಇಳುವರಿ ತಂದುಕೊಟ್ಟಿತ್ತು. ಆದರೆ ಈ ಬಾರಿ ಆರಂಭದಲ್ಲಿ ಸುರಿದ ಅತಿವೃಷ್ಟಿ ಮಳೆಯಿಂದ ಹಾನಿಗೊಳಗಾಗಿದೆ. ನಂತರದ ದಿನಗಳಲ್ಲಿ ಮಳೆ ಕೊರತೆ ಎದುರಿಸುವಂತಾಗಿದೆ.

ಮೃಗಶಿರ ಮಳೆ ನಂತರ ಮತ್ತೆ ಬೆಳೆಗೆ ಅನುಕೂಲಕರ ಮಳೆಯಾಗಿಲ್ಲ. ಹೀಗೆ ಇನ್ನೊಂದು ವಾರ ಕಳೆದರೆ ಗೋವಿನಜೋಳ ನೀರಿಲ್ಲದೆ ಒಣಗಿ ಹೋಗುತ್ತವೆ. ಹೆಸರು ಇಳುವರಿ ಕುಂಠಿತಗೊಳ್ಳಲಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.

ತಾಲ್ಲೂಕಿನಲ್ಲಿ ಅತಿವೃಷ್ಟಿ ಮಳೆಯ ಹೊಡೆತಕ್ಕೆ ಸಿಲುಕಿ ಬೆಳೆ ಹಾನಿಗೊಳಗಾಗಿದೆ. ಉಳಿದುಳಿದ ಬೆಳೆಗೆ ಮಳೆಯ ಅವಶ್ಯಕತೆ ಇದೆ ಮಳೆಯಾದರೆ ಹೆಸರು ಉತ್ತಮ ಇಳುವರಿ ಬರಬಹುದು ತೇವಾಂಶ ಕೊರತೆ ಕಾಣುತ್ತಿದೆ. ಗೋವಿನಜೋಳಕ್ಕೆ ಲದ್ದಿಹುಳು ಬರದಂತೆ ತಡೆಯಲು ಸಕಾಲದಲ್ಲಿ ರೈತರು ಔಷಧಿ ಸಿಂಪರಣೆ ಮಾಡಲು ಗಮನ ಹರಿಸಬೇಕು.
– ಶ್ರೀನಾಥ್ ಚಿಮ್ಮಲಗಿ ಸಹಾಯಕ ಕೃಷಿ ನಿರ್ದೇಶಕರು ನವಲಗುಂದ
ಈಗಾಗಲೇ ಎಕರೆಗೆ ಹದಿನೈದು ಇಪ್ಪತ್ತು ಸಾವಿರ ರೂಪಾಯಿ ಖರ್ಚಾಗಿದೆ. ಮೋಡಗಳಿದ್ದರೂ ನಿಲ್ಲುತ್ತಿಲ್ಲ. ಗಾಳಿಗೆ ಚದುರಿ ಹೋಗುತ್ತಿವೆ. ಮಳೆಯಿಲ್ಲದೆ ಹೆಸರು ಬೆಳೆ ಬಾಡುತ್ತಿದೆ. ಗೋವಿನಜೋಳ ಮೇಲೆಳದೆ ಕಮರಿ ಹೋಗುವಂತಾಗಿದ್ದು ಮತ್ತೆ ನಷ್ಟ ಅನುಭವಿಸುವ ಆತಂಕ ಎದುರಾಗಿದೆ.
– ಪ್ರಕಾಶ್ ಶಿಗ್ಲಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.