
ಹುಬ್ಬಳ್ಳಿ: ನಗರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ಹಾಗೂ ಗುರುವಾರ ಮಳೆ ಸುರಿಯಿತು. ಇದರಿಂದಾಗಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ತುಸು ಅಡಚಣೆ ಉಂಟಾಯಿತು.
ಬುಧವಾರ ರಾತ್ರಿ ಮಳೆ ಸುರಿದಿದ್ದರಿಂದ ಪಟಾಕಿ ಹೊಡೆಯಲಾಗಲಿಲ್ಲ. ಮನೆಯ ಸುತ್ತ ಬೆಳಗುತ್ತಿದ್ದ ದೀಪಗಳೂ ಆರಿದವು. ಮಳೆ ಬಿಡುವು ನೀಡಿದ ಬಳಿಕ ಮತ್ತೆ ದೀಪಗಳು ಪ್ರಜ್ವಲಿಸಿದವು, ಪಟಾಕಿ ಸದ್ದು ಹೊಮ್ಮಿತು.
ಗುರುವಾರ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣ, ನಡುನಡುವೆ ಬಿಸಿಲು ಇತ್ತು. ಮಧ್ಯಾಹ್ನ ಸುರಿದ ಮಳೆಗೆ ತಗ್ಗು–ಗುಂಡಿಗಳಿಂದ ಕೂಡಿದ್ದ ರಸ್ತೆಗಳಲ್ಲಿ ನೀರು ತುಂಬಿತು. ಮಣ್ಣಿನ ರಸ್ತೆಗಳು ಕೆಸರುಮಯವಾದವು. ಕಸ ತುಂಬಿದ್ದ ಚರಂಡಿಗಳಿಂದ ಕೊಳಚೆ, ರಸ್ತೆಗೆ ಹರಿಯಿತು. ಇದರಿಂದ ವಾಹನ ಸವಾರರು, ಸುತ್ತಲಿನ ಮನೆಯವರು ತೊಂದರೆಗೀಡಾದರು.
ಮಳೆ ನಿಂತ ಬಳಿಕ ವಾಹನಗಳು ಒಮ್ಮೆಲೆ ರಸ್ತೆಗೆ ಇಳಿದಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು. ಮಳೆ ನೀರು ನಿಂತ ರಸ್ತೆಗಳಲ್ಲಿ ಕೆಸರು ಸಿಡಿಸುತ್ತಲೇ ವಾಹನಗಳು ಸಾಗಿದ್ದರಿಂದ ಪಾದಚಾರಿಗಳು ಪರದಾಡಿದರು. ಅರೆ ತಾಪದ ವಾತಾವರಣ ಬಹುತೇಕರನ್ನು ಬಾಧಿಸಿತು. ಬೇರಾವುದೇ ಹಾನಿ ಉಂಟಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಬಹುತೇಕ ರೈತರು ಹಿಂಗಾರು ಹಂಗಾಮಿನ ಬಿತ್ತನೆಗೆ ಮುಂದಾಗಿದ್ದಾರೆ. ‘ಹಿಂಗಾರು ಬೆಳೆಗಳಿಗೆ ಇಬ್ಬನಿ, ಅಲ್ಪ ಮಳೆ ಸಾಕಿದೆ. ಮಳೆ ಹೀಗೆ ಮುಂದುವರಿದರೆ ಬೆಳೆ ಹಾನಿಯಾಗಲಿದೆ. ಅತಿವೃಷ್ಟಿಯಿಂದ ಮುಂಗಾರು ಬೆಳೆಗಳು ಕೈಸೇರಲಿಲ್ಲ, ಹಿಂಗಾರನ್ನೇ ನಂಬಿಕೊಂಡಿದ್ದೇವೆ’ ಎಂದು ರೈತರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.