ADVERTISEMENT

ಧಾರವಾಡ | ‘ನಿಸರ್ಗ’ದಿಂದ ಜಿಟಿ, ಜಿಟಿ ಮಳೆ...

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 17:04 IST
Last Updated 3 ಜೂನ್ 2020, 17:04 IST
ಧಾರವಾಡದಲ್ಲಿ ಸುರಿದ ಮಳೆಯಲ್ಲೇ ಹೋದ ಮಹಿಳೆಯರು
ಧಾರವಾಡದಲ್ಲಿ ಸುರಿದ ಮಳೆಯಲ್ಲೇ ಹೋದ ಮಹಿಳೆಯರು   

ಧಾರವಾಡ/ಹುಬ್ಬಳ್ಳಿ: ನಿಸರ್ಗ ಚಂಡಮಾರುತದ ಪರಿಣಾಮದಿಂದಾಗಿ ಅವಳಿ ನಗರದಲ್ಲಿ ಬುಧವಾರ ಮೋಡ ಕವಿದ ವಾತಾವರಣವಿತ್ತು. ದಿನಪೂರ್ತಿ ಬಿಡುವು ನೀಡದೆ ಜಿಟಿ ಜಿಟಿ ಮಳೆ ಸುರಿಯಿತು. ತಂಪಾದ ಹವೆಯೂ ಇತ್ತು.

ಮೇಲಿಂದ ಮೇಲೆ ಮಳೆ ಬರುತ್ತಿರುವ ಕಾರಣ ಗ್ರಾಮೀಣ ಭಾಗದಲ್ಲಿ ರೈತರು ಜಮೀನುಗಳಲ್ಲಿ ಬಿತ್ತನೆ ಸೇರಿ ಇನ್ನಿತರ ಕೃಷಿ ಚಟುವಟಿಕೆಗಳಲ್ಲಿ ಮಗ್ನರಾಗಿದ್ದರು. ಹುಬ್ಬಳ್ಳಿಯಲ್ಲಿ ಮಂಗಳವಾರ ರಾತ್ರಿಯಿಂದಲೇ ಮಳೆ ಆರಂಭವಾಗಿತ್ತು. ಬುಧವಾರ ಕೆಲಹೊತ್ತು ಜೋರಾಗಿ ಸುರಿದರೆ, ಧಾರವಾಡದಲ್ಲಿ ಸಂಜೆ ವೇಳೆಗೆ ಜೋರು ಮಳೆ ಬಂತು. ಕೊರೊನಾ ಸೋಂಕಿನ ಭೀತಿ ಮತ್ತು ತಂಪನೆಯ ಗಾಳಿಯ ಪರಿಣಾಮದಿಂದ ಎಂದಿನಂತೆ ವಾಹನಗಳ ಸಂಚಾರ ಕಂಡುಬರಲಿಲ್ಲ.

ಮಳೆಯಿಂದ ರಸ್ತೆಯ ತಗ್ಗು-ಗುಂಡಿಗಳಲ್ಲಿ ನೀರು ತುಂಬಿದ್ದರಿಂದ ಜನ ಪರದಾಡಿದರು. ಧಾರವಾಡದ ನೆಹರೂ ನಗರ, ಮಾಳಮಡ್ಡಿ, ಲಕ್ಷ್ಮಿಸಿಂಗನಕೇರಿ ರಸ್ತೆಯಲ್ಲಿ ಗುಂಡಿಗಳು ನೀರಿನಿಂದ ತುಂಬಿಕೊಂಡ ಪರಿಣಾಮ ವಾಹನ ಸವಾರರು ಪರದಾಡಿದರು. ಕಿಮ್ಸ್‌ ಮುಂಭಾಗ ಸೇರಿದಂತೆ ಹಲವೆಡೆ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಮಳೆ ನೀರು ನಿಂತಿತ್ತು.

ADVERTISEMENT

ಪಾದಚಾರಿಗಳು ಕಟ್ಟಡಗಳ ಬಳಿ ಆಶ್ರಯ ಪಡೆದರು. ಪ್ರಯಾಣಿಕರು ಮಳೆಯಲ್ಲಿ ಒದ್ದೆಯಾಗಿ ಬಸ್‌ ಹತ್ತುತ್ತಿದ್ದ ದೃಶ್ಯ ಕಂಡುಬಂತು.ರಸ್ತೆ ಕಾಮಗಾರಿ ನಡೆಯುತ್ತಿರುವ ಧಾರವಾಡದ ಪಿ.ಬಿ. ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸಿದರು. ಧಾರವಾಡದ ಸಪ್ತಾಪುರದಲ್ಲಿ ಮತ್ತು ಹುಬ್ಬಳ್ಳಿಯ ಜೆ.ಪಿ. ನಗರದಲ್ಲಿ ಒಂದೊಂದು ಮರಗಳು ಧರೆಗುರುಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.