ADVERTISEMENT

‘ರಾಜಕಾಲುವೆ; ಒತ್ತುವರಿದಾರರ ವಿರುದ್ಧ ಕ್ರಮ’

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 16:29 IST
Last Updated 2 ಫೆಬ್ರುವರಿ 2025, 16:29 IST
ಹುಬ್ಬಳ್ಳಿಯ ಎಸ್‌.ಎಂ. ಕೃಷ್ಣನಗರದ ಬಳಿ ನಡೆಯುತ್ತಿರುವ ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಶಾಸಕ ಪ್ರಸಾದ ಅಬ್ಬಯ್ಯ ಭಾನುವಾರ ಅಧಿಕಾರಿಗಳ ಜತೆ ವೀಕ್ಷಿಸಿದರು
ಹುಬ್ಬಳ್ಳಿಯ ಎಸ್‌.ಎಂ. ಕೃಷ್ಣನಗರದ ಬಳಿ ನಡೆಯುತ್ತಿರುವ ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಶಾಸಕ ಪ್ರಸಾದ ಅಬ್ಬಯ್ಯ ಭಾನುವಾರ ಅಧಿಕಾರಿಗಳ ಜತೆ ವೀಕ್ಷಿಸಿದರು   

ಹುಬ್ಬಳ್ಳಿ: ‘ನಗರದಲ್ಲಿರುವ ರಾಜಕಾಲುವೆಗೆ ಹಂತ ಹಂತವಾಗಿ ತಡೆಗೋಡೆ ನಿರ್ಮಿಸಲಾಗುತ್ತಿದೆ. ಅದರ ಅಭಿವೃದ್ಧಿಗೆ ಅಡ್ಡಿಯಾಗಿರುವ ಒತ್ತುವರಿದಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಇಲ್ಲಿನ ಎಸ್.ಎಂ‌. ಕೃಷ್ಣನಗರದ ಬಳಿ ನಡೆಯುತ್ತಿರುವ ರಾಜಕಾಲುವೆ ತಡೆಗೋಡೆ ಕಾಮಗಾರಿಯನ್ನು ಭಾನುವಾರ ವೀಕ್ಷಿಸಿ ಅವರು ಮಾತನಾಡಿದರು.

‘ರಾಜಕಾಲುವೆಯ ಅಕ್ಕಪಕ್ಕದ ಒಂಬತ್ತು ಮೀಟರ್‌ ಜಾಗ ಸರ್ಕಾರದ ಸ್ವತ್ತಾಗಿರುತ್ತದೆ. ಅದನ್ನು ಒತ್ತುವರಿ ಮಾಡಿಕೊಳ್ಳುವುದು ಕಾನೂನು ಉಲ್ಲಂಘನೆ. ಜನರಿಗೆ ಕಾನೂನಿನ ಅರಿವು ಮತ್ತು ಭಯ ಇಲ್ಲದಂತಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯವೂ ಇದಕ್ಕೆ ಕಾರಣ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಪ್ರತಿ ಬಾರಿ ಮಳೆ ಬಂದಾಗಲೂ ಕಾಲುವೆಯ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ತಡೆಗೋಡೆ ನಿರ್ಮಿಸಲಾಗುತ್ತಿದೆ. ಆದರೆ, ಇದಕ್ಕೆ ಸಾರ್ವಜನಿಕರು ಸ್ಪಂದಿಸದಿರುವುದು ದುರದೃಷ್ಟ. ಈ ಹಿನ್ನೆಲೆಯಲ್ಲಿ ಎಷ್ಟೇ ಒತ್ತಡ ಎದುರಾದರೂ ಒತ್ತುವರಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು, ಸ್ಥಳೀಯ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.