ADVERTISEMENT

ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 13:00 IST
Last Updated 22 ಏಪ್ರಿಲ್ 2019, 13:00 IST
ವಿವೇಕಾನಂದ ವೃತ್ತದಲ್ಲಿ ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ಎಸ್ ಸಂಘಟನೆಗಳ ಸಹಯೋಗದಲ್ಲಿ ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು
ವಿವೇಕಾನಂದ ವೃತ್ತದಲ್ಲಿ ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ಎಸ್ ಸಂಘಟನೆಗಳ ಸಹಯೋಗದಲ್ಲಿ ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು   

ಧಾರವಾಡ: ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಆಗ್ರಹಿಸಿ ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ಎಸ್ ಸಂಘಟನೆಗಳ ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.

ಕಡಪಾ ಮೈದಾನದಿಂದ ಮುಖ್ಯ ರಸ್ತೆಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ವಿವೇಕಾನಂದವೃತ್ತದಲ್ಲಿ ಸಮಾವೇಶಗೊಂಡಿತು.

‘ಮಹಿಳೆಯರನ್ನು ಭೋಗದ ವಸ್ತುವಿನಂತೆ ನೋಡುವ ಮನಸ್ಥಿತಿ ಬದಲಾಗಬೇಕು. ಸಾಂಸ್ಕೃತಿಕ ಅಧಃಪತನಕ್ಕೆ ಹಿಡಿದ ಕೈಗನ್ನಡಿ ಇದು’ ಎಂದು ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಎಐಡಿವೈಒ ರಾಜ್ಯ ಉಪಾಧ್ಯಕ್ಷ ಲಕ್ಷಣಜಡಗಣ್ಣನವರ ಆಗ್ರಹಿಸಿದರು.

ADVERTISEMENT

‘ಜನಪ್ರತಿನಿಧಿಗಳು, ರಾಜಕಾರಣಿಗಳು ತಾಯಿ, ತಂಗಿ, ಅಕ್ಕಂದಿರನ್ನು ಗೌರವಿಸುವಂತಿದ್ದರೆ ಮೊದಲು ಅಶ್ಲೀಲ ಸಿನಿಮಾ, ಸಾಹಿತ್ಯವನ್ನು ನಿಷೇಧಿಸಬೇಕು. ವಿದ್ಯಾರ್ಥಿನಿ ಕೊಲೆಗೆ ಸಂಬಧಿಸಿದಂತೆ ನಮ್ಮ ಸಂಘಟನೆಗಳು ರಾಜ್ಯ ವ್ಯಾಪಿ ಪ್ರತಿಭಟನೆಯ ಮೂಲಕ ನ್ಯಾಯ ದೊರಕಿಸುವಂತೆ ಒತ್ತಾಯಿಸುತ್ತಿವೆ. ಸರ್ಕಾರಗಳು ಮಾತ್ರ ಇನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದರು.

‘ಸಾಮಾನ್ಯ ವ್ಯಕ್ತಿಗೂ ಸಾವು ಅಸಹಜ ಎಂದು ಕಂಡು ಬರುತ್ತದೆ. ಪೊಲೀಸರು ಪ್ರಾಥಮಿಕ ದೂರನ್ನು ದಾಖಲಿಸಿಕೊಳ್ಳಲಿಲ್ಲ ಎಂದು ವಿದ್ಯಾರ್ಥಿನಿಯ ಪೋಷಕರೇ ಹೇಳುತ್ತಿದ್ದಾರೆ. ಫಲಿತಾಂಶದ ಹತಾಶೆಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಹೇಳಲಾಗುತ್ತಿದೆ’ ಎಂದು ಜಡಗಣ್ಣನವರ ಆರೋಪಿಸಿದರು.

ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ಬಿ. ಮಹಾಂತೇಶ ಮಾತನಾಡಿ, ‘ಇದೊಂದು ಘೋರವಾದ ಕೃತ್ಯ. ಇದು ಕರ್ನಾಟಕದ ನಿರ್ಭಯಾ ಪ್ರಕರಣ. ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಈ ಹತ್ಯೆ ಬೇರೆಲ್ಲಾ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಮಹಿಳಾ ಸಂರಕ್ಷಣಾ ಸಮಿತಿಗಳನ್ನುಸರ್ಕಾರಗಳು ಬಲಪಡಿಸಿ, ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಎಸ್‌ಯುಸಿಐ (ಸಿ) ಜಿಲ್ಲಾ ಸಮಿತಿಯ ಸದಸ್ಯರಾದ ಗಂಗಾಧರ ಬಡಿಗೇರ ಮಾತನಾಡಿ, ‘ಹೆಣ್ಣನ್ನು ಗೌರವಿಸದ ಹೊರತು ನಿಜವಾದ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಅಂತ ಮೌಲ್ಯಯುತ ಸಮಾಜಕ್ಕಾಗಿ ನಾವೆಲ್ಲ ಒಂದಾಗಿ ಹೋರಾಡಬೇಕಿದೆ’ ಎಂದು ಹೇಳಿದರು.

ವಿವಿಧ ಕಾಲೇಜುಗಳಿಂದ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮುಖಂಡರಾದ ಮಧುಲತಾ ಗೌಡರ್, ರಮೇಶ ಹೊಸಮನಿ, ಭವಾನಿಶಂಕರ, ವಿಜಯಲಕ್ಷ್ಮಿ ದೇವತ್ಕಲ್, ಕಿರಣ ಮಾಳಗಿ, ರಣಜಿತ್ ದೂಪದ್, ಸಿಂಧೂ, ದೇವಮ್ಮ, ಶಶಿಕಲಾ, ರಾಜು, ಭಾಗ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.