ADVERTISEMENT

ಹುಬ್ಬಳ್ಳಿ: 14 ದಿನದ ಮಗುವಿನ ಹೊಟ್ಟೆಯಲ್ಲಿ ಭ್ರೂಣ, ಯಶಸ್ವಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 3:10 IST
Last Updated 9 ಅಕ್ಟೋಬರ್ 2025, 3:10 IST
<div class="paragraphs"><p>ಶಸ್ತ್ರಚಿಕಿತ್ಸೆ </p></div>

ಶಸ್ತ್ರಚಿಕಿತ್ಸೆ

   

(ಸಾಂದರ್ಭಿಕ  ಚಿತ್ರ)

ಹುಬ್ಬಳ್ಳಿ: ಇಲ್ಲಿನ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಕೆಎಂಸಿ–ಆರ್‌ಐ) ವೈದ್ಯರು 14 ದಿನದ ಮಗುವಿನ ಹೊಟ್ಟೆಯಲ್ಲಿದ್ದ ಮೂರು ಸೆಂ.ಮೀ. ಉದ್ದದ ಭ್ರೂಣದ ಗಡ್ಡೆಯನ್ನು ಲ್ಯಾಪ್ರೊಸ್ಕೋಪಿ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ADVERTISEMENT

‘ಕುಂದಗೋಳದ ಮಹಿಳೆ ಸಹಜ ಹೆರಿಗೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ನಲ್ಲಿ ಮಗುವಿನ ಹೊಟ್ಟೆ ಭಾಗದಲ್ಲಿ ಎಲುಬಿನ ಅಂಶವಿರುವ ಮತ್ತೊಂದು ಮಗುವಿನ ಲಕ್ಷಣದ ಭ್ರೂಣ ಕಂಡುಬಂದಿತ್ತು. ಡಾ. ರಾಜಶೇಖರ ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರತೆಗೆದಿದೆ’ ಎಂದು ಕೆಎಂಸಿ–ಆರ್‌ಐ ಆಸ್ಪತ್ರೆಯ ನಿರ್ದೇಶಕ ಈಶ್ವರ ಹೊಸಮನಿ ತಿಳಿಸಿದರು.

‘ಮಹಿಳೆ ಎರಡನೇ ಹೆರಿಗೆ ಪೂರ್ವ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಾಗ, ಅವರ ಗರ್ಭದಲ್ಲಿರುವ ಮಗುವಿನ ಹೊಟ್ಟೆಯಲ್ಲಿ ದ್ರವತುಂಬಿದ ಗಡ್ಡೆ ಇರುವುದು ಸ್ಕ್ಯಾನಿಂಗ್‌ನಲ್ಲಿ ಕಂಡುಬಂದಿತ್ತು’ ಎಂದರು.

‘ಶಸ್ತ್ರಚಿಕಿತ್ಸೆ ಮೂಲಕ ತೆಗೆದಿರುವ ಮಗುವಿನ ಹೊಟ್ಟೆಭಾಗದ ಅಂಶದಲ್ಲಿ ಎಲುಬಿನ ಹೊರತಾಗಿ ಮತ್ಯಾವ ಜೀವಕೋಶಗಳೂ ಕಂಡುಬಂದಿಲ್ಲ. ಆದರೂ ಹೆಚ್ಚಿನ ಪರೀಕ್ಷೆಗೆ ಪ್ಯಾಥೋಲಜಿ ವಿಭಾಗಕ್ಕೆ ಕಳುಹಿಸಿದ್ದೇವೆ. ಅಲ್ಲಿ ಮೈಕ್ರೋಸ್ಕೋಪಿ ಮೂಲಕ ಸಂಪೂರ್ಣ ಪರೀಕ್ಷೆಗೆ ಒಳಪಡಿಸಲಾಗುವುದು. ಇದು ಅಪರೂಪದ ಪ್ರಕರಣವಾಗಿದ್ದು, ನಮ್ಮ ಆಸ್ಪತ್ರೆಯಲ್ಲಿ ಇದು ಮೊದಲನೆಯದು. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.