ADVERTISEMENT

ರಥವೇರಿ ಬಂದ ಸೂರ್ಯನಿಗೆ ವಂದನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 15:54 IST
Last Updated 7 ಫೆಬ್ರುವರಿ 2022, 15:54 IST
ಧಾರವಾಡದ ಶಿಕ್ಷಕರ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಸೋಮವಾರ ನಡೆದ ರಥ ಸಪ್ತಮಿ ಕಾರ್ಯಕ್ರಮದಲ್ಲಿ ಯೋಗ ಸಾಧಕರು ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸಿದರು
ಧಾರವಾಡದ ಶಿಕ್ಷಕರ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಸೋಮವಾರ ನಡೆದ ರಥ ಸಪ್ತಮಿ ಕಾರ್ಯಕ್ರಮದಲ್ಲಿ ಯೋಗ ಸಾಧಕರು ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸಿದರು   

ಧಾರವಾಡ:ಚಳಿಗಾಲದಲ್ಲಿ ಮುದುಡುವ ಶರೀರ, ರಥಸಪ್ತಮಿಯ ಬಳಿಕ ಸೂರ್ಯನ ಶಾಖದಿಂದಾಗಿ ನವಚೈತನ್ಯದಿಂದ ತುಂಬಿಕೊಳ್ಳುತ್ತದೆ. ಹೀಗೆ ರಥ ಬದಲಿಸಿ ಹೊಸ ರಥವನ್ನೇರುವ ಸೂರ್ಯನಿಗೆ ಯೋಗದ ಮೂಲಕ ಹಲವೆಡೆ ನಮಿಸಲಾಯಿತು.

ರಥಸಪ್ತಮಿ ಪ್ರಯುಕ್ತ ಇಲ್ಲಿನ ಯೋಗಮಯಂ ಯೋಗ ಸಾಧನ ಕೇಂದ್ರದಲ್ಲಿ ಸಾಮೂಹಿಕವಾಗಿ 108 ಸೂರ್ಯ ನಮಸ್ಕಾರ ಯಜ್ಞ ಆಯೋಜಿಸಲಾಗಿತ್ತು. ಕೇಂದ್ರದ ಮುಖ್ಯಸ್ಥ ಲಕ್ಷ್ಮಣ ಬೋಡಕೆ ಮಾರ್ಗದರ್ಶನದಲ್ಲಿ 150ಕ್ಕೂ ಹೆಚ್ಚು ಜನ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉಪನ್ಯಾಸಕರಾಗಿ ಪಾಲ್ಗೊಂಡ ಆಕಾಶವಾಣಿ ಉದ್ಘೋಷಕ ಡಾ. ಶಶಿಧರ ನರೇಂದ್ರ, ಶ್ಲೋಕದ ಮಹತ್ವ, ಸಂಸ್ಕೃತಿ ಮತ್ತು ವೈಜ್ಞಾನಿಕ ಪರಂಪರೆ ಹಾಗೂ ಆರೋಗ್ಯಕರ ಜೀವನದಲ್ಲಿ ಸೂರ್ಯನ ಪ್ರಾಮುಖ್ಯತೆಯನ್ನು ವಿವರಿಸಿದರು.

ADVERTISEMENT

ತಾಲ್ಲೂಕು ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷ ಗುರು ತಿಗಡಿ ಮಾತನಾಡಿ, ‘ಯೋಗ ಜೀವನದ ಅವಿಭಾಜ್ಯ ಅಂಗವಾಗಿ. ಆರೋಗ್ಯ ಕಾಪಾಡಲು ಎಲ್ಲರೂ ಯೋಗ ಮಾಡಬೇಕು’ ಎಂದು ಸಲಹೆ ನೀಡಿದರು.

ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಒಂದು ನಿಮಿಷದ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.ರವಿರಾಜ ಪುರೋಹಿತ ದಂಪತಿ ಪೂಜೆ ಮತ್ತು ಹೋಮ ಕಾರ್ಯ ನೆರವೇರಿಸಿದರು.

ಎನ್‌.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ, ‘ನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುತ್ತಾರೆ. ಬೇಕರಿ ಆಹಾರವನ್ನು ತ್ಯಜಿಸಿ, ದೇಸಿ ಆಹಾರವನ್ನು ವಿದ್ಯಾರ್ಥಿಗಳು ಹೆಚ್ಚಾಗಿ ಸೇವಿಸಬೇಕು’ ಎಂದರು.

ಸಮನ್ವಯ ಅಧಿಕಾರಿ ಮಂಜುನಾಥ ಅಡ್ವೇರ, ಶಾಲೆಯ ಪ್ರಾಚಾರ್ಯ ಡಾ. ವೈ.ಪಿ. ಕಲ್ಲನಗೌಡರ, ದೈಹಿಕ ಶಿಕ್ಷಕ ಪ್ರಮೋದ ರೋಣದ ಇದ್ದರು. ಯೋಗ ಶಿಕ್ಷಕ ಡಾ. ಪ್ರಕಾಶ ಪವಾಡಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರ ಮಾಡಿಸಿದರು.

ನವಲೂರು ಗ್ರಾಮದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.