ಧಾರವಾಡದಲ್ಲಿ ನಡೆದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪನಾ ದಿನಾಚರಣೆಯಲ್ಲಿ ‘ಗೆಳೆಯರ ಬಳಗ’ಕ್ಕೆ ಸಂದ ‘ಸಿರಿಗನ್ನಡಂ ಗೆಲ್ಗೆ ರಾ.ಹ.ದೇಶಪಾಂಡೆ ಪ್ರಶಸ್ತಿ’ ಅನ್ನು ಬಳಗದ ಅಧ್ಯಕ್ಷ ಸುದೀಪ ಪಂಡಿತ ಸ್ವೀಕರಿಸಿದರು.
ಧಾರವಾಡ: ‘ಜಾಗತೀಕರಣ, ಡಿಜಿಟಲ್ ಯುಗದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಕಂಟಕ ಎದುರಾಗಿದೆ. ಇಂಥ ಸಂದಿಗ್ಧ ಕಾಲದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಭಾಷಾ ಸಾಂಸ್ಕೃತಿಕ ಆಧಾರಸ್ತಂಭವಾಗಿ ನಿಂತಿದೆ’ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.
ನಗರದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಭಾನುವಾರ ನಡೆದ ಕರ್ನಾಟಕ ವಿದ್ಯಾವರ್ಧಕ ಸಂಘದ 136ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಉನ್ನತ ಶಿಕ್ಷಣ, ತಂತ್ರಜ್ಞಾನ, ಆಡಳಿತ, ನಿತ್ಯದ ಬದುಕಿನಲ್ಲಿ ಕನ್ನಡದ ಬಳಕೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಯುವಪೀಳಿಗೆಯು ಇಂಗ್ಲಿಪ್ ಭಾಷೆಯ ವ್ಯಾಮೋಹಕ್ಕೆ ಅಪಾರವಾಗಿ ಒಳಗಾಗಿದೆ. ತಾಯ್ನುಡಿಯಿಂದ ದೂರವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕನ್ನಡವು ನಮ್ಮೆಲ್ಲರನ್ನು ಜಾತಿ, ಪ್ರಾಂತ್ಯ, ಧರ್ಮಗಳನ್ನು ಮೀರಿ ಒಂದುಗೂಡಿಸುವ ದೊಡ್ಡ ಶಕ್ತಿ. ಕನ್ನಡ ಭಾಷೆಯಷ್ಟೇ ಅಲ್ಲ, ಅದು ನಮ್ಮ ಗುರುತು, ಸಂಸ್ಕೃತಿ ಮತ್ತು ಆತ್ಮವಿಶ್ವಾಸ. ಕನ್ನಡವನ್ನು ಸರ್ಕಾರಿ ಭಾಷೆಯಾಗಿ ಬಳಸುವುದರ ಜತೆಗೆ ನಮ್ಮ ಬದುಕು, ಕಾಯಕದ ಭಾಗವಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾವರ್ಧಕ ಸಂಘ ಪ್ರಮುಖ ಪಾತ್ರ ವಹಿಸಬೇಕಿದೆ’ ಎಂದರು.
‘ವಿದ್ಯಾವರ್ಧಕ ಸಂಘವು ಕಾಲಕಾಲಕ್ಕೆ ತಕ್ಕಂತೆ ಕಾರ್ಯವಿಧಾನ ರೂಪಿಸಿಕೊಂಡು ತಲೆಮಾರಿಗೆ ಅಗತ್ಯವಾದ ಶೈಕ್ಷಣಿಕ, ಸಾಹಿತ್ಯಿಕ, ಭಾಷಾ ಧ್ಯೇಯಗಳಿಗೆ ಅನುಗುಣವಾಗಿ ಆಧುನಿಕತೆ ಮೈಗೂಡಿಸಿಕೊಂಡು ಸಾಗುತ್ತಿದೆ’ ಎಂದು ತಿಳಿಸಿದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ‘ವಿದ್ಯಾವರ್ಧಕ ಮತ್ತು ಹಾವೇರಿಯ ಗೆಳೆಯರ ಬಳಗ ಮಾಡಿದ ಕಾರ್ಯಗಳು ಸ್ಮರಣೀಯ. ಕನ್ನಡದ ಬೆಳವಣಿಗೆಗೆ ಎರಡೂ ಸಂಸ್ಥೆಗಳು ಶ್ರಮಿಸಿವೆ’ ಎಂದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.