ADVERTISEMENT

ಧರ್ಮ, ಕೋಮುವಾದ ಹೆಣ್ಣಿನ ಪರಮಶತ್ರು: ವಿಮರ್ಶಕಿ ಡಾ. ಎಂ.ಎಸ್.ಆಶಾದೇವಿ

ವಿಮರ್ಶಕಿ ಡಾ. ಎಂ.ಎಸ್.ಆಶಾದೇವಿ ಕಳವಳ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 13:19 IST
Last Updated 22 ಫೆಬ್ರುವರಿ 2023, 13:19 IST
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬುಧವಾರ ನಡೆದ 24ನೇ ಸಂಸ್ಕೃತಿ ಸಮ್ಮೇಳನದಲ್ಲಿ ಡಾ. ಶಾಂತಾ ಇಮ್ರಾಪುರ ಅವರನ್ನು ಪ್ರೊ. ಕೆ.ಬಿ.ಗುಡಸಿ ಹಾಗೂ ಡಾ. ನಿಜಲಿಂಗಪ್ಪ ಮಟ್ಟಿಹಾಳ ಅಭಿನಂದಿಸಿದರು. ಡಾ. ನಿಂಗಪ್ಪ ಮುದೇನೂರು, ಡಾ. ಎಂ.ಎಸ್.ಆಶಾದೇವಿ,  ಮಲ್ಲಪ್ಪ ಬಂಡಿ ಇದ್ದಾರೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬುಧವಾರ ನಡೆದ 24ನೇ ಸಂಸ್ಕೃತಿ ಸಮ್ಮೇಳನದಲ್ಲಿ ಡಾ. ಶಾಂತಾ ಇಮ್ರಾಪುರ ಅವರನ್ನು ಪ್ರೊ. ಕೆ.ಬಿ.ಗುಡಸಿ ಹಾಗೂ ಡಾ. ನಿಜಲಿಂಗಪ್ಪ ಮಟ್ಟಿಹಾಳ ಅಭಿನಂದಿಸಿದರು. ಡಾ. ನಿಂಗಪ್ಪ ಮುದೇನೂರು, ಡಾ. ಎಂ.ಎಸ್.ಆಶಾದೇವಿ,  ಮಲ್ಲಪ್ಪ ಬಂಡಿ ಇದ್ದಾರೆ.   

ಧಾರವಾಡ: ‘ಧರ್ಮ ಮತ್ತು ಕೋಮುವಾದ ಹೆಣ್ಣಿನ ಪರಮಶತ್ರುಗಳಾಗಿದ್ದು, ಇಂದಿನ ಹೆಣ್ಣುಮಕ್ಕಳ ಸ್ಥಿತಿ ಹಿಂದಿಗಿಂತಲೂ ಭೀಕರವಾಗಿದೆ’ ಎಂದು ವಿಮರ್ಶಕಿ ಡಾ. ಎಂ.ಎಸ್.ಆಶಾದೇವಿ ಅಭಿಪ್ರಾಯಪಟ್ಟರು.

ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಬುಧವಾರದಿಂದ ಆರಂಭಗೊಂಡ 24ನೇ ಸಂಸ್ಕೃತಿ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಹೆಣ್ಣು ಸಂಸ್ಕೃತಿಯ ಆಕರವೂ ಹೌದು, ಪರಿಕರವೂ ಹೌದು ಮತ್ತು ಅದರ ಬಲಿಪಶುವೂ ಹೌದು. ಹೆಣ್ಣಿನ ದೇಹ, ಮನಸ್ಸು ಹಾಗೂ ಬುದ್ಧಿಯನ್ನು ಮತ್ತೆ ಅದೇ ಸಂಸ್ಕೃತಿಯ ಚೌಕಟ್ಟಿನಲ್ಲಿ ಕಟ್ಟುತ್ತಿರುವ ದೊಡ್ಡ ಹುನ್ನಾರ ನಡೆದಿದ್ದು, ಹಿಂದೆಂದೂ ಕಾಣದಿರುವ ಭೀಕರ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂಥ ಸಂದರ್ಭದಲ್ಲಿ ಸ್ತ್ರೀವಾದಿಗಳು ಸೇರಿಕೊಂಡು ಮಹಿಳಾ ಸಾಹಿತ್ಯದ ಪರಂಪರೆಯನ್ನು ಕಟ್ಟಿಕೊಳ್ಳಬೇಕಾಗಿದೆ’ ಎಂದರು.

ADVERTISEMENT

‘ಮಹಿಳಾ ಸಾಹಿತ್ಯದ ಸಾಂಸ್ಕೃತಿಕ ಅನುಸಂದಾನ ಎಂದರೆ ಮಹಿಳಾ ಸಾಹಿತ್ಯವನ್ನು ನೋಡಲು ಇಟ್ಟುಕೊಂಡಿರುವ ಮಾನದಂಡಗಳು ಆಮೂಲಾಗ್ರವಾಗಿ ಬದಲಾಗಬೇಕು. ಗಂಡು ಮತ್ತು ಹೆಣ್ಣು ಭಿನ್ನ ಎನ್ನುವುದು ಎಷ್ಟು ಸತ್ಯವೋ, ಸಮಾನ ಎಂಬುದೂ ಅಷ್ಟೇ ಸತ್ಯ. ಹೀಗಾಗಿ ಗಂಡಿನ ನೋಟ, ಸಂವೇದನೆಯಿಂದ ಬೇಕಾದ ಅರ್ಥಗಳಲ್ಲಿ ಕಲ್ಪಿಸಿಕೊಂಡ ಮಹಿಳಾ ಸಾಹಿತ್ಯದ ಮರು ಅಧ್ಯಯನ ಈಗ ನಡೆಸಬೇಕಾಗಿದೆ. ಅವನ ಚರಿತ್ರೆಯಾದ ಕನ್ನಡ ಸಾಹಿತ್ಯವು ಅವಳ ಚರಿತ್ರೆಯೂ ಆಗಬೇಕು. ಕನ್ನಡದ ಮೊದಲ ಸ್ತ್ರೀವಾದಿ ಎಂದೇ ಕರೆಯಲಾಗುವ ಅಲ್ಲಮರನ್ನೂ ಒಳಗೊಂಡು ಇಡೀ ಮಹಿಳಾ ಸಾಹಿತ್ಯವನ್ನು ಹೊಸ ದೃಷ್ಟಿಕೋನದಿಂದ ನೋಡಿದಲ್ಲಿ ಕನ್ನಡ ಸಾಹಿತ್ಯದ ನಕಾಶೆಯೇ ಬದಲಾಗಲಿದೆ’ ಎಂದರು.

‘ಹೆಣ್ಣಿನ ಸಂವೇದನೆ ನಮ್ಮೊಳಗೆ ಸೇರದೇ ಹೋದರೆ ಕಾವ್ಯದ ಓದು ಅಸಾಧ್ಯ. ಸಾಂಸ್ಕೃತಿಕ ಅನುಸಂದಾನದಲ್ಲೂ ಗಂಡು ಮತ್ತು ಹೆಣ್ಣಿನ ನಡುವೆ ಸಾವಯವ ಸಂಬಂಧ ನಡೆಯಬೇಕು. ಆದರೆ ಇಲ್ಲಿಯವರೆಗಿನ ಸಾಹಿತ್ಯದ ಓದು, ರಚನೆ ಹಾಗೂ ಕಾವ್ಯ ಮೀಮಾಂಸೆ ಸಂವೇದನೆಯನ್ನೇ ಕಳೆದುಕೊಂಡ ಅಂಗವಿಲವಾಗಿದೆ’ ಎಂದು ಆಶಾದೇವಿ ವಿಷಾಧ ವ್ಯಕ್ತಪಡಿಸಿದರು.

‘ಇಂಥ ಸಂದರ್ಭದಲ್ಲಿ ಮಹಿಳೆ ತನಗೆ ತಾನೇ ಹಾಕಿಕೊಳ್ಳುವ ಸ್ವಬಂಧನಗಳನ್ನು ಮಹಿಳಾ ಸಾಹಿತ್ಯದ ಮರು ಓದಿನ ಮೂಲಕ ಮುನ್ನೆಲೆಗೆ ತರಬೇಕಿದೆ. ಚರಿತ್ರೆ ಬದಲಿಸಲು ಸಾಧ್ಯವಿಲ್ಲದಿರಬಹುದು. ಆದರೆ ಚರಿತ್ರೆ ನೋಡುವ ಕಣ್ಣನ್ನು ಬದಲಿಸಲು ಅವಕಾಶವಿದ್ದು, ಅದನ್ನು ಮಾಡಬೇಕಿದೆ’ ಎಂದರು.

‘ಸಾಹಿತ್ಯ ಎನ್ನುವುದು ಹೆಣ್ಣಿಗೆ ಗಂಡಿಗಿಂತ ಇನ್ನೂ ಆಳದ ಆತ್ಮಸಖ್ಯ. ಈಗಲೂ ಯಾವುದೇ ವಿಚಾರ ಅಥವಾ ಭಾವವನ್ನು ಹೆಣ್ಣು ಇನ್ನೂ ಮುಕ್ತವಾಗಿ ಹೇಳಲು ಸರಿಯಾದ ಅವಕಾಶ ಬಾರದ ಹಿನ್ನೆಲೆಯಲ್ಲಿ, ಆಕೆ ಅದನ್ನು ಕಾವ್ಯದ ಮೂಲಕ ಹೇಳುವುದು ಒಂದು ಸ್ವಗತ. ಆ ಭಾಷೆಯ ಮೂಲಕವೇ ಹೆಣ್ಣು ತನ್ನನ್ನು ಪುನರ್‌ರಚಿಸಿಕೊಳ್ಳುವುದಕ್ಕೆ ಪ್ರಯತ್ನಪಡುತ್ತಿದ್ದಾಳೆ’ ಎಂದು ಡಾ. ಆಶಾದೇವಿ ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ಶಾಂತಾ ಇಮ್ರಾಪುರ ಮಾತನಾಡಿ, ‘ಎಲ್ಲಾ ಸವಾಲುಗಳನ್ನು ಎದುರಿಸುತ್ತಲೇ ದುರ್ಗಮದ ದಾರಿಯಲ್ಲಿ ಪ್ರಯಾಣಿಸುತ್ತಿದ್ದೇವೆ. ಮಹಿಳೆ ಹಾಗೂ ಪುರುಷರು ಸೇರಿಕೊಂಡು ನಡೆಸುವ ಸಂವಾದಗಳು ಸಾಧ್ಯವಾಗದಿದ್ದರೆ ಯಾವ ಸಂಸ್ಖೃತಿಯೂ ಸಮಗ್ರವಾಗಿ ಅರಳಲು ಸಾಧ್ಯವಿಲ್ಲ’ ಎಂದರು.

ಕಾರ್ಯಕ್ರಮಕ್ಕೆ ಕುಲಪತಿ ಪ್ರೊ. ಕೆ.ಬಿ.ಗುಡಸಿ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ವಿಭಾಗದ ಮುಖ್ಯಸ್ಥ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ವಹಿಸಿದ್ದರು. ಕುಲಸಚಿವ ಯಶಪಾಲ್ ಕ್ಷೀರಸಾಗರ ಇದ್ದರು.

ನಂತರ ನಡೆದ ಗೋಷ್ಠಿಗಳಲ್ಲಿ ‘ಪ್ರಾಚೀನ ಕನ್ನಡ ಸಾಹಿತ್ಯ: ಮಹಿಳಾ ಅಭಿವ್ಯಕ್ತಿಯ ನೆಲೆಗಳು’ ವಿಷಯ ಕುರಿತು ಡಾ. ಬಿ.ಎಂ.‍ಪುಟ್ಟಯ್ಯ, ಡಾ. ಅನಿತಾ ಗುಡಿ, ಡಾ. ಶಿವಗಂಗಾ ರುಮ್ಮಾ, ಡಾ. ಮೀನಾಕ್ಷಿ ಬಾಳಿ ಮಾತನಾಡಿದರು. ‘ಆಧುನಿಕ ಕನ್ನಡ ಸಾಹಿತ್ಯ: ಮಹಿಳಾ ಅಭಿವ್ಯಕ್ತಿಯ ನೆಲೆಗಳು’ ವಿಷಯ ಕುರಿತು ಡಾ. ಕೆ.ವೈ.ನಾರಾಯಣಸ್ವಾಮಿ, ಸುನಂದಾ ಕಡಮೆ, ಡಾ. ಭಾರತಿದೇವಿ, ರಜನಿ ಗರುಡ ಮಾತನಾಡಿದರು.

ಕುವೆಂಪು ಅವರೇ ತುಂಬಾ ದೊಡ್ಡವರು.

‘ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಶಾಂತಾ ಇಮ್ರಾಪುರ ಅವರ ಕುರಿತು ವಿಭಾಗದ ಮುಖ್ಯಸ್ಥ ಡಾ. ನಿಜಲಿಂಗಪ್ಪ ಮಟ್ಟಿಹಾಳ ಅವರ ಬರೆದ ಬರಹದ ಕೊನೆಯ ಸಾಲು ‘... ಸೋಮಶೇಖರ ಸದಾ ನಿಮ್ಮ ಜೊತೆಗೆ’ ಎಂದಿದೆ. ಆದರೆ ಶತಶತಮಾನಗಳಿಂದಲೂ ಈ ಪದ್ಧತಿ ಬದಲೇ ಆಗಲಿಲ್ಲ. ಹಿಂದಿನಿಂದಲೂ ದೊಡ್ಡ ಸಾಹಿತಿಗಳಾರೂ ತಮ್ಮ ಪತ್ನಿಯನ್ನು ತಮ್ಮ ಕವಿತೆಯಲ್ಲಿ ದಾಖಲಿಸಿಲಲ್ಲ. ಆದರೆ ಕುವೆಂಪು ಅವರು ‘ನಾನು ಹೇಮಿ ಗಂಡ’ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ಕುವೆಂಪು ಅವರೇ ದೊಡ್ಡವರು. ಕನ್ನಡ ಮಹಿಳಾ ಸಾಹಿತ್ಯದ ಸಾಂಸ್ಕೃತಿಕ ಅನುಸಂದಾನ ಆಗಬೇಕೆಂದರೆ ಹೀಗೇ ಆಗಬೇಕು. ಮಹಿಳೆಯರ ಬಗ್ಗೆ ಗೌರವ ಇರುವುದು ಬೇರೆ, ಆದರೆ ಆದರೆ ಸಂವೇದನೆಯಲ್ಲಿ ಬದಲಾಗಿದ್ದರೆ, ನಾವು ಬಯಸುವ ನೈಜ ಬದಲಾವಣೆ ಅಸಾಧ್ಯ’ ಎಂದು ಡಾ. ಆಶಾದೇವಿ ಅಭಿಪ್ರಾಯಪಟ್ಟರು.

ಸಂಸ್ಕೃತಿ ಸಮ್ಮೇಳನದಲ್ಲಿ ಇಂದು

ಕರ್ನಾಟಕ ವಿಶ್ವವಿದ್ಯಾಲಯ, ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠ: 24ನೇ ಸಂಸ್ಕೃತಿ ಸಮ್ಮೇಳನ– ಕನ್ನಡ ಮಹಿಳಾ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ. ಗೋಷ್ಠಿ– ಸಾಂಸ್ಕೃತಿಕ ಚಳವಳಿಗಳು ಮತ್ತು ಮಹಿಳಾ ಅಭಿವ್ಯಕ್ತಿ: ರಘುನಾಥ ಚ.ಹಾ., ಡಾ. ವಿನಯಾ, ಡಾ. ಮುಮ್ತಾಜ್ ಬೇಗಂ, ಡಾ. ಅರುಣ ಜೋಳದಕೂಡ್ಲಗಿ. ಬೆಳಿಗ್ಗೆ 10.

ಗೋಷ್ಠಿ: ಸ್ತ್ರೀವಾದಿ ಸಾಹಿತ್ಯ ಮೀಮಾಂಸೆಯ ಅಭಿವ್ಯಕ್ತಿಗಳು. ಸಬಿತಾ ಬನ್ನಾಡಿ, ಡಾ. ಸುಭಾಷ ರಾಜಮಾನೆ, ಡಾ. ಗೀತಾ ವಸಂತ, ಡಾ. ನಾಗಭೂಷಣ ಬಗ್ಗನಡು. ಮಧ್ಯಾಹ್ನ 12.

ಗೋಷ್ಠಿ: ಸಮಕಾಲೀನ ಸಾಂಸ್ಕೃತಿಕ ಸಂದರ್ಭ: ಮಹಿಳಾ ಅಭಿವ್ಯಕ್ತಿ. ಡಾ. ಆನಂದ ಋಗ್ವೇದಿ, ಡಾ. ವಿಕ್ರಮ ವಿಸಾಜೆ, ಶ್ರೀದೇವಿ ಕೆರೆಮನಿ, ಸಿ.ಜಿ.ಮಂಜುಳಾ. ಮಧ್ಯಾಹ್ನ 2.30.

ಸಮಾರೋ: ಡಾ. ರಹಮತ್ ತರೀಕೆರೆ, ಡಾ. ಸಿ.ಕೃಷ್ಣಮೂರ್ತಿ, ಡಾ. ಎಸ್.ಸುಭೇಶ್. ಸರ್ವಾಧ್ಯಕ್ಷರ ನುಡಿ– ಡಾ. ಶಾಂತಾ ಇಮ್ರಾಪುರ. ಅಧ್ಯಕ್ಷತೆ– ಡಾ. ನಿಜಲಿಂಗಪ್ಪ ಮಟ್ಟಿಹಾಳ. ಸಂಜೆ 4.30.

ಸ್ಥಳ: ಕನ್ನಡ ಅಧ್ಯಯನ ಪೀಠ, ಕವಿವಿ ಆವರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.