ADVERTISEMENT

ಹುಬ್ಬಳ್ಳಿ: ಸಂಸ್ಕರಣಾ ಶುಲ್ಕ ಪಾವತಿಸಲು ನೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 11:27 IST
Last Updated 18 ಆಗಸ್ಟ್ 2021, 11:27 IST

ಹುಬ್ಬಳ್ಳಿ: ಸಹಾಯಕ ಸರ್ಕಾರಿ ಅಭಿಯೋಜಕ (ಎಪಿಪಿ) ಮತ್ತು ಸಹಾಯಕ ಸರ್ಕಾರಿ ಪ್ಲೀಡರ್‌ಗಳ (ಎಜಿಪಿ) ನೇಮಕಾತಿಯಲ್ಲಿ ಆಕ್ರಮವಾಗಿದೆ ಎನ್ನುವ ಆರೋಪದ ಬಗ್ಗೆ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್‌ ₹2 ಲಕ್ಷ ಸಂಸ್ಕರಣಾ ಶುಲ್ಕ ಪಾವತಿಸುವಂತೆ ಸೂಚಿಸಿದೆ ಎಂದು ಸಮುದಾಯದ ಮುಖಂಡ ಎಸ್‌.ಆರ್‌. ಹಿರೇಮಠ ತಿಳಿಸಿದರು.

ಬುಧವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ದಾಖಲೆಗಳ ಝರಾಕ್ಸ್‌, ಕೊರಿಯರ್‌ ಮೊತ್ತ ಹೀಗೆ ವಿವಿಧ ಕಾರ್ಯಗಳಿಗೆ ಹಣ ಪಾವತಿಸುವಂತೆ ಹೈಕೋರ್ಟ್‌ ತಿಳಿಸಿದೆ. ಇಷ್ಟೊಂದು ಮೊತ್ತವನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಕೊಡಬೇಕಾಗಿರುವುದರಿಂದ ಒಂದು ತಿಂಗಳು ಸಮಯ ನೀಡಬೇಕು ಎಂದು ನಾವು ಮಾಡಿಕೊಂಡಿದ್ದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ’ ಎಂದರು.

‘ಹಣ ದುರುಪಯೋಗ ಆಗುವ ಸಾಧ್ಯತೆ ಇರುವುದರಿಂದ ನೆರವಿಗಾಗಿ ಯಾರಿಗೂ ಬ್ಯಾಂಕ್‌ ಖಾತೆ ಸಂಖ್ಯೆ ಕೊಡುವುದಿಲ್ಲ. ಜನ ಚೆಕ್‌, ಡಿಡಿ ಅಥವಾ ನೇರ ನಗದಿನ ಮೂಲಕ ತಮ್ಮ ಕೈಲಾದಷ್ಟು ಹಣ ನೀಡಬೇಕು. ₹2 ಲಕ್ಷ ಸಂಗ್ರಹವಾದ ಬಳಿಕ ಯಾರೂ ಹಣ ಕೊಡಬೇಡಿ ಎಂದು ಮಾಧ್ಯಮಗಳ ಮೂಲಕ ಪ್ರಕಟಣೆ ನೀಡುತ್ತೇವೆ’ ಎಂದರು.

ADVERTISEMENT

ಅವಕಾಶ ನೀಡಬಾರದು: ಬಳ್ಳಾರಿ ಜಿಲ್ಲೆ ಪ್ರವೇಶಿಸಲು ಅವಕಾಶ ನೀಡುವಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ಬಗ್ಗೆ ಪ್ರತಿಕ್ರಿಯಿಸಿದ ಹಿರೇಮಠ ಅವರು ‘ಗಣಿಗಾರಿಕೆಯಲ್ಲಿ ಹಗಲು ದರೋಡೆ ಮಾಡಿದವರಿಗೆ ಯಾವುದೇ ಕಾರಣಕ್ಕೂ ಜಿಲ್ಲೆ ಪ್ರವೇಶಿಸಲು ಅವಕಾಶ ಕೊಡಬಾರದು. ಪ್ರಜಾಪ್ರಭುತ್ವ ಉಳಿಯಬೇಕಾದರೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಬೇಕು’ ಎಂದರು.

ಆಗ್ರಹ: ಶಿವಮೊಗ್ಗ ಜಿಲ್ಲೆಯಲ್ಲಿ 2015ರಿಂದ 2017ರ ತನಕದ ಅವಧಿಯಲ್ಲಿ 9,934 ಎಕರೆ ಎರಡು ಗುಂಟೆ ಅರಣ್ಯ ಭೂಮಿಯನ್ನು ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಡಿನೋಟಿಫಿಕೇಷನ್‌ ಮಾಡಲಾಗಿದೆ. ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು, 1980ರ ನಂತರ ಡಿನೋಟಿಫಿಕೇಷನ್‌ ಮಾಡಿರುವ ಎಲ್ಲಾ ಅರಣ್ಯ ಭೂಮಿಯನ್ನು ರಾಜ್ಯ ಸರ್ಕಾರ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.