ADVERTISEMENT

ಸೇವಾದಳಕ್ಕೆ ಶೇ 10ರಷ್ಟು ಟಿಕೆಟ್ ಮೀಸಲಿಡಿ: ರಾಮಚಂದ್ರ ಎಂ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 7:34 IST
Last Updated 4 ಜುಲೈ 2022, 7:34 IST
ಹುಬ್ಬಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಸೇವಾದಳದ ಹುಬ್ಬಳ್ಳಿ– ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಜಂಟಿ ಸಭೆಯಲ್ಲಿ ಸೇವಾದಳದ ರಾಜ್ಯ ಘಟಕದ ಅಧ್ಯಕ್ಷ ರಾಮಚಂದ್ರ ಮಾತನಾಡಿದರು – ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಸೇವಾದಳದ ಹುಬ್ಬಳ್ಳಿ– ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಜಂಟಿ ಸಭೆಯಲ್ಲಿ ಸೇವಾದಳದ ರಾಜ್ಯ ಘಟಕದ ಅಧ್ಯಕ್ಷ ರಾಮಚಂದ್ರ ಮಾತನಾಡಿದರು – ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಪಕ್ಷದ ಸಂಘಟನೆಗೆ ಸೇವಾದಳದ ಕೊಡುಗೆಯೂ ಇದೆ. ಹಾಗಾಗಿ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಸೇರಿದಂತೆ ವಿವಿಧ ಚುನಾವಣೆಗಳಿಗೆ ಟಿಕೆಟ್ ನೀಡುವಾಗ ಸೇವಾದಳದಲ್ಲಿ ಸೇವೆ ಸಲ್ಲಿಸಿದವರನ್ನು ಸಹ ಪರಿಗಣಿಸಬೇಕು. ಅದಕ್ಕಾಗಿ ಶೇ 10ರಷ್ಟು ಟಿಕೆಟ್‌ ಮೀಸಲಿಡಬೇಕು’ ಎಂದು ಸೇವಾದಳದ ರಾಜ್ಯ ಘಟಕದ ಅಧ್ಯಕ್ಷ ರಾಮಚಂದ್ರ ಎಂ. ಹೇಳಿದರು.

ನಗರದ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಸೇವಾದಳದ ಹುಬ್ಬಳ್ಳಿ– ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು.

‘ಸೇವಾದಳವು ಪಕ್ಷವನ್ನು ವಿವಿಧ ಹಂತಗಳಲ್ಲಿ ಸಂಘಟಿಸುವಲ್ಲಿ ನಿರತವಾಗಿದೆ. ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅದಕ್ಕಾಗಿ ದುಡಿಯುತ್ತಿದ್ದಾರೆ. ಅಂತಹವರಿಗೆ ಚುನಾವಣೆಯಲ್ಲಿ ಅವಕಾಶ ನೀಡಬೇಕು. ಇದರಿಂದ ಹೊಸಬರಿಗೆ ಅವಕಾಶ ಸಿಕ್ಕಂತಾಗುತ್ತದೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಮಹಾನಗರ ಸೇವಾದಳದ ಅಧ್ಯಕ್ಷ ಡಿ.ಎಂ. ದೊಡ್ಡಮನಿ, ‘1923ರಲ್ಲಿ ಕಾಕಿನಾಡದಲ್ಲಿ ಕಾಂಗ್ರೆಸ್ ಸೇವಾದಳ ಹುಟ್ಟಿತು. ಆರಂಭದ ದಿನಗಳಿಂದಲೂ ಪಕ್ಷದ ಬೆಳವಣಿಗೆಗೆ ಸೇವಾದಳದವರು ಮಹತ್ತರ ಕೊಡುಗೆ ನೀಡಿದ್ದಾರೆ. ಹಾಗಾಗಿ, ಸೇವಾದಳವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು’ ಎಂದು ಹೇಳಿದರು.

ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ ಮಾತನಾಡಿದರು. ರಾಜ್ಯ ಉಪಾಧ್ಯಕ್ಷರಾದ ದೀಪಕ್ ಶೇಟ್, ತುಳಸಿ ಗಿರಿ, ಕಾರ್ಯಾಧ್ಯಕ್ಷೆ ಕಾಂಚನಾ ಘಾಟಗೆ, ಗ್ರಾಮೀಣ ಸೇವಾದಳದ ಅಧ್ಯಕ್ಷ ಚಂಬಣ್ಣ ಹಾಳದೋಟರ, ವಿಜನಗೌಡ ಪಾಟೀಲ,ಪಕ್ಷದ ಬ್ಲಾಕ್ ಹಾಗೂ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.