ADVERTISEMENT

ಸೇನಾ ವೃತ್ತಿಯಿಂದ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 10:43 IST
Last Updated 12 ಮಾರ್ಚ್ 2020, 10:43 IST
ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಬಸವರಾಜ ಗಡಾದ ಅವರನ್ನು ಗ್ರಾಮಸ್ಥರು ಗುರುವಾರ ಸಂಭ್ರಮದಿಂದ ಬರಮಾಡಿಕೊಂಡರು
ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಬಸವರಾಜ ಗಡಾದ ಅವರನ್ನು ಗ್ರಾಮಸ್ಥರು ಗುರುವಾರ ಸಂಭ್ರಮದಿಂದ ಬರಮಾಡಿಕೊಂಡರು   

ಧಾರವಾಡ: ಬಡತನದಲ್ಲೇ ಶಿಕ್ಷಣ ಪೂರೈಸಿ ದೇಶ ಸೇವೆಗೆ ಹೊರಟುನಿಂತ ಯುವಕನನ್ನು ಹೆಮ್ಮೆಯಿಂದ ಕಳಿಸಿಕೊಟ್ಟಿದ್ದತಾಲ್ಲೂಕಿನ ಹೆಬ್ಬಳ್ಳಿ ಗ್ರಾಮ, ಸಾರ್ಥಕ ಸೇವೆ ಪೂರೈಸಿ ಮರಳಿದ ಅದೇ ಸೈನಿಕನನ್ನು ಗುರುವಾರ ಅಷ್ಟೇ ಸಂಭ್ರಮ ಹಾಗೂ ಅಭಿಮಾನದಿಂದಬರಮಾಡಿಕೊಂಡಿತು.

ಗ್ರಾಮದ ಬಸವರಾಜ ಗಡಾದ ಅವರು 2001ರಲ್ಲಿ ಬಿ.ಎ. ಕಲಿತು ಭಾರತೀಯ ಸೇನೆ ಸೇರಿದ್ದರು. ಮದ್ರಾಸ್ ರೆಜಿಮೆಂಟ್‌ನಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ಆರಂಭಿಸಿದ ಇವರು, ಜಮ್ಮು ಕಾಶ್ಮೀರ, ಸಿಯಾಚಿನ್, ಲೇಹ್, ಲಡಾಕ್ ಸೇರಿದಂತೆ ದೇಶದ ವಿವಿಧ ಪ್ರದೇಶಗಳಲ್ಲಿ 19 ವರ್ಷಗಳ ಗಡಿಕಾಯುವ ಕಾಯಕ ಮುಗಿಸಿ ನಿವೃತ್ತಿ ಹೊಂದಿದ ನಂತರ ಗ್ರಾಮಕ್ಕೆ ಮರಳಿದರು.

ತಮ್ಮ ಕರ್ತವ್ಯದಲ್ಲಿಜಮ್ಮು ಕಾಶ್ಮೀರದ ಉಗ್ರರೊಂದಿಗೆ ಸೆಣೆಸಾಡಿ ಮೂವರು ಉಗ್ರರನ್ನು ಸದೆಬಡಿದ ಕೀರ್ತಿ ಇವರದ್ದು.ಕುಪ್ವಾಡ ಜಿಲ್ಲೆಯ ಪಂಚಗಾಂವ್‌ ಊರಿನಲ್ಲಿ ಇಬ್ಬರು ಉಗ್ರರು ಹಾಗೂ ನೌಶಾರಾ ಜಿಲ್ಲೆಯಲ್ಲಿ ಒಬ್ಬ ಉಗ್ರನನ್ನು ಬಸವರಾಜ ಹೊಡೆದುರುಳಿಸಿದ್ದನ್ನು ಗ್ರಾಮದ ಜನರು ನೆನೆದು ಕೊಂಡಾಡಿದರು. ಇವರಿಗೆ ಸಂದ ಹೈಆಲ್ಟಿಟ್ಯೂಟ್ ಮೆಡಲ್, ಒಪಿ ರಕ್ಷಕ, ಇವೆನ್ ಮೆಡಲ್, ಸಿ ಕ್ರಾಸಿಂಗ್ ಮೆಡಲ್, ಅರುಣಾಚಲಪ್ರದೇಶ ಮೆಡಲ್‌ಗಳ ಕುರಿತು ಸ್ನೇಹಿತರು ಅಭಿಮಾನದಿಂದ ಹೇಳಿದರು.

ADVERTISEMENT

ಸಮವಸ್ತ್ರದಲ್ಲಿ ಗ್ರಾಮಕ್ಕೆ ಮರಳಿದ ಬಸವರಾಜ ಅವರ ಸ್ವಾಗತಕ್ಕೆಇಡೀ ಗ್ರಾಮವೇ ಸಿಂಗಾರಗೊಂಡಿತ್ತು. ಗ್ರಾಮಕ್ಕೆ ಬಂದ ಇವರು ನೇರವಾಗಿಗ್ರಾಮದ ವೀರ ಯೋಧ ಉಮೇಶ ಸವದತ್ತಿ ಅವರ ಸಮಾಧಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ತೆರೆದ ವಾಹನದಲ್ಲಿ ಇವರ ಅದ್ಧೂರಿ ಮೆರವಣಿಗೆ ನಡೆಯಿತು.ಗ್ರಾಮಕ್ಕೆ ಮರಳಿದ ಯೋಧನಿಗೆ ಗ್ರಾಮಸ್ಥರು ಹಾರ ಹಾಕಿ, ಆರತಿ ಎತ್ತಿ, ಸಿಹಿ ತಿನ್ನಿಸಿ ಬರ ಮಾಡಿಕೊಂಡರು. ಹೆಮ್ಮೆಯ ಯೋಧನಿಗೆ ಸಲ್ಯೂಟ್ ಹೊಡೆದು ಗೌರವ ಸಲ್ಲಿಸಿದರು. ಸಮವಸ್ತ್ರದಲ್ಲಿದ್ದ ಬಸವರಾಜ ಅವರೊಂದಿಗೆ ಸ್ನೇಹಿತರು, ಗ್ರಾಮಸ್ಥರು ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.

ಗ್ರಾಮದಲ್ಲಿ ಅಪ್ನಾದೇಶ, ಶಾಲಾ ಮಕ್ಕಳು, ಹೆಬ್ಬಳ್ಳಿ ಗ್ರಾಮದ ಗುರು ಹಿರಿಯರು, ಬಸವರಾಜ ಗಡಾದ ಅವರ ಸ್ನೇಹಿತರ ಬಳಗದ ವತಿಯಿಂದ ಈ ಕಾರ್ಯಕ್ರಮ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ವಿವಿಧ ಶಾಲೆಗಳ ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ‘ಭಾರತ ಮಾತಾ ಕೀ ಜೈ’ ಘೋಷಣೆ ಮೊಳಗಿದವು.

‘ಊರ ಜನರ ಮೆಚ್ಚುಗೆ ಬಗ್ಗೆ ನನಗೆ ಅಭಿಮಾನವಿದೆ’ ಎಂದು ಬಸವರಾಜ ಗಡಾಡ ಸಂತೋಷ ವ್ಯಕ್ತಪಡಿಸಿದರು. ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಇಡೀ ಕುಟುಂಬ ಸದಸ್ಯರು ಅಭಿಮಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.