ADVERTISEMENT

‘ಶಾಂತಿನಿಕೇತನ’ ರಸ್ತೆಗೆ ಸಿಕ್ತು ದುರಸ್ತಿ ಭಾಗ್ಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 20:05 IST
Last Updated 23 ಜುಲೈ 2019, 20:05 IST
ಶಾಂತಿನಿಕೇತನ ಕಾಲೊನಿಯಲ್ಲಿನ ರಸ್ತೆ ದುರಸ್ತಿ ಮಾಡುತ್ತಿದ್ದ ಚಿತ್ರಣ ಮಂಗಳವಾರ ಕಂಡುಬಂತು
ಶಾಂತಿನಿಕೇತನ ಕಾಲೊನಿಯಲ್ಲಿನ ರಸ್ತೆ ದುರಸ್ತಿ ಮಾಡುತ್ತಿದ್ದ ಚಿತ್ರಣ ಮಂಗಳವಾರ ಕಂಡುಬಂತು   

ಹುಬ್ಬಳ್ಳಿ: ಸದಾ ಕೆಸರು ರಸ್ತೆಯ ಗಿಜಿಗಿಜಿಯಿಂದ ರೋಸಿ ಹೋಗಿದ್ದ ಬೈರಿದೇವರಕೊಪ್ಪ ಬಳಿಯ ಶಾಂತಿನಿಕೇತನ ಕಾಲೊನಿಯ ಜನರಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ.

ಮಳೆ ಸ್ವಲ್ಪ ವಿರಾಮ ನೀಡಿರುವ ಕಾರಣ ಪಾಲಿಕೆ ಅಧಿಕಾರಿಗಳು ಈ ಬಡಾವಣೆಯಲ್ಲಿ ಕೆಸರು ರಸ್ತೆ ಸರಿಪಡಿಸುವ ಕೆಲಸ ಆರಂಭಿಸಿದ್ದಾರೆ. ಗುಂಡಿ ಬಿದ್ದ ಜಾಗದಲ್ಲಿ ಬೆಣಚು ಕಲ್ಲುಗಳನ್ನು ಹಾಕುತ್ತಿದ್ದ ಚಿತ್ರಣ ಮಂಗಳವಾರ ಕಂಡುಬಂತು. ರಸ್ತೆ ಅವ್ಯವಸ್ಥೆಯಿಂದ ಬೇಸತ್ತು ಹೋಗಿದ್ದ ಅಲ್ಲಿಯ ಜನ ಫೇಸ್‌ಬುಕ್‌ ಅಭಿಯಾನ ಕೂಡ ಆರಂಭಿಸಿದ್ದರು.ಇದರ ಬಗ್ಗೆ ಮಂಗಳವಾರ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಇದರಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

‘ಸದ್ಯ ಆಗುತ್ತಿರುವ ದುರಸ್ತಿ ಕಾರ್ಯದಿಂದ ಸಮಾಧಾನವಾಗಿದೆ. ಮೊದಲಿಗಿಂತಲೂ ರಸ್ತೆ ಉತ್ತಮವಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ’ ಎಂದು ಸ್ಥಳೀಯ ನಿವಾಸಿ ಸದಾಶಿವ ಸಂತಸ ವ್ಯಕ್ತಪಡಿಸಿದರು.

ADVERTISEMENT

‘ಪಾಲಿಕೆ ಚುನಾವಣೆ ನೆಪಕ್ಕೆ ಮಾತ್ರ ರಸ್ತೆ ದುರಸ್ತಿ ಮಾಡಬಾರದು. ಕಳಪೆ ಕಾಮಗಾರಿ ಮಾಡಿ ಮತ್ತೆ ರಸ್ತೆ ಕೆಟ್ಟು ಹೋದರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ಬಸವರಾಜ ಹೇಳಿದರು.

‘ಅವ್ಯವಸ್ಥೆ ಸರಿಪಡಿಸುವಂತೆ ಫೇಸ್‌ಬುಕ್‌ ಅಭಿಯಾನ ಆರಂಭಿಸಲಾಗಿತ್ತು. ನಮ್ಮ ಹೋರಾಟಕ್ಕೆ ‍ಪ್ರಜಾವಾಣಿ ಕೂಡ ಕೈ ಜೋಡಿಸಿದ್ದರಿಂದ ಬಲ ಬಂದಂತಾಯಿತು. ಈಗಲಾದರೂ ರಸ್ತೆ ಆಗುತ್ತಿದೆಯಲ್ಲ ಎಂದು ಖುಷಿಯಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ವಿನಾಯಕ ಹುದ್ದಿಕರ್‌ ಹಾಗೂ ಅನ್ನಪೂರ್ಣ ಕಾಳೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.