ADVERTISEMENT

ಆರ್‌ಟಿಒ: ತೆರಿಗೆ ಸಂಗ್ರಹ ಗುರಿ ಹೆಚ್ಚಳ

ನಾಗರಾಜ ಚಿನಗುಂಡಿ
Published 4 ನವೆಂಬರ್ 2023, 6:11 IST
Last Updated 4 ನವೆಂಬರ್ 2023, 6:11 IST
<div class="paragraphs"><p>ತೆರಿಗೆ ಸಂಗ್ರಹ ಹೆಚ್ಚಳ ( ಸಾಂದರ್ಭಿಕ ಚಿತ್ರ )</p></div>

ತೆರಿಗೆ ಸಂಗ್ರಹ ಹೆಚ್ಚಳ ( ಸಾಂದರ್ಭಿಕ ಚಿತ್ರ )

   

ಹುಬ್ಬಳ್ಳಿ: ಧಾರವಾಡದಿಂದ ಪ್ರತ್ಯೇಕಗೊಂಡು 2017ರಲ್ಲಿ ಅಸ್ತಿತ್ವಕ್ಕೆ ಬಂದ ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ಪ್ರಸಕ್ತ ಹಣಕಾಸು ವರ್ಷದಲ್ಲಿ ಕಳೆದ ವರ್ಷಕ್ಕಿಂತ ಶೇ 15ರಷ್ಟು ಅಂದರೆ ₹28 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹಿಸುವ ಗುರಿ ನೀಡಲಾಗಿದೆ.

ಹಿಂದಿನ ಹಣಕಾಸು ವರ್ಷದಲ್ಲಿ (2022–23) ನೋಂದಣಿ ಶುಲ್ಕಗಳು ಮತ್ತು ದಂಡ ಸೇರಿ ಒಟ್ಟು ₹114.99 ಕೋಟಿ (ಶೇ 99.51) ತೆರಿಗೆ ಸಂಗ್ರಹವಾಗಿತ್ತು. ಈ ಸಲ ಹೆಚ್ಚಳ ಗುರಿ ಮೊತ್ತ ₹28 ಕೋಟಿ ಸೇರಿ ಒಟ್ಟು ₹143.56 ಕೋಟಿ ತೆರಿಗೆಯನ್ನು 2023–24 ಹಣಕಾಸು ವರ್ಷಾಂತ್ಯಕ್ಕೆ ಸಂಗ್ರಹಿಸಬೇಕಿದೆ.

ADVERTISEMENT

ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್‌ ಅಂತ್ಯಕ್ಕೆ 6 ತಿಂಗಳಲ್ಲಿ ಒಟ್ಟು ₹56.06 ಕೋಟಿ ತೆರಿಗೆ ಸಂಗ್ರಹವಾಗಿದ್ದು, ಶೇ 50ರಷ್ಟು ಗುರಿ ಸಾಧನೆಯಾಗಿಲ್ಲ. ಎಂದಿನಂತೆ ಪ್ರತಿ ತಿಂಗಳು 1,300 ಹೊಸ ವಾಹನಗಳು ನೋಂದಣಿ ಆಗುತ್ತಿವೆ. ಇದೀಗ ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ವಾಹನಗಳು ನೋಂದಣಿಯಾಗುವ ಸಾಧ್ಯತೆ ಇದೆ.

‘ಸರ್ಕಾರವು ಎಲ್ಲ ವಾಹನಗಳ ನೋಂದಣಿ ಶುಲ್ಕವನ್ನು ಏರಿಸಿದೆ. ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ನವೆಂಬರ್‌ನಲ್ಲಿ ಹೊಸ ಶುಲ್ಕಗಳು ಅನ್ವಯವಾದರೆ ತೆರಿಗೆ ಸಂಗ್ರಹ ಗುರಿ ಬಹುತೇಕ ಸಾಧ್ಯವಾಗುತ್ತದೆ. ಇದಲ್ಲದೆ ನಿಯಮಗಳನ್ನು ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸುವುದನ್ನು ಮುಂದುವರಿಸಲಾಗಿದೆ. ಈ ವರ್ಷ ಸೆಪ್ಟೆಂಬರ್‌ ಅಂತ್ಯದವರೆಗೂ ಒಟ್ಟು 1,700 ಪ್ರಕರಣಗಳನ್ನು ದಾಖಲಿಸಲಾಗಿದೆ. ಕಳೆದ ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅಂತ್ಯದವರೆಗೂ ಒಟ್ಟು ₹1, 60, 83,900 ದಂಡ ಸಂಗ್ರಹಿಸಲಾಗಿದೆ’ ಎಂದು ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ಹಣಕಾಸು ವರ್ಷದ ಆರಂಭಿಕ ಆರು ತಿಂಗಳಲ್ಲಿ ಸಂಗ್ರಹವಾಗಿದ್ದ ಒಟ್ಟು ತೆರಿಗೆ ಮೊತ್ತಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದ ಆರು ತಿಂಗಳಲ್ಲಿ ₹2.8 ಕೋಟಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಒಟ್ಟಾರೆ ಪ್ರತಿ ತಿಂಗಳು ದಂಡ ಮತ್ತು ನೋಂದಣಿ ಶುಲ್ಕದ ಮೊತ್ತ ಮೊದಲಿಗಿಂತಲೂ ಏರಿಕೆ ಪ್ರಮಾಣದಲ್ಲಿಯೇ ಇದೆ.

ವಾಹನಗಳ ನೋಂದಣಿ ಶುಲ್ಕ ಪಾವತಿ ಬಹುತೇಕ ಆನ್‌ಲೈನ್‌ ಮಾಡಲಾಗಿದೆ. ಆದರೂ ಕೆಲವರು ಸಮಯ ನೀಡುವುದಕ್ಕೆ ಸಾಧ್ಯವಾಗದೆ, ನಿಯಮಗಳನ್ನು ತಿಳಿದುಕೊಳ್ಳಲು ಮುಂದಾಗದೆ ಮಧ್ಯವರ್ತಿಗಳನ್ನು ಹುಡುಕುವುದು ಸಾಮಾನ್ಯವಾಗಿದೆ.

ಶಾಲಾ ವಾಹನಗಳ ನೋಂದಣಿ ಶುಲ್ಕ ಸದ್ಯಕ್ಕೆ ಹೆಚ್ಚಿಸಲಾಗಿದೆ. ಇನ್ನುಳಿದ ವಾಹನಗಳ ಶುಲ್ಕ ಕೂಡ ಏರಿಸಲಾಗಿದ್ದು, ತಾತ್ಕಾಲಿಕವಾಗಿ ತಡೆ ಮಾಡಿದ್ದಾರೆ. ನವೆಂಬರ್‌ ಬಳಿಕ ಹೊಸ ನೋಂದಣಿ ಶುಲ್ಕ ಜಾರಿಯಾಗಬಹುದು
ಕೆ.ದಾಮೋದರ್‌, ಅಧಿಕಾರಿ, ಪ್ರಾದೇಶಿಕ ಸಾರಿಗೆ ಕಚೇರಿ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.