ADVERTISEMENT

ಜನಸೇವೆಗೆ ಅರ್ಪಿಸಿಕೊಂಡ ಅಭ್ಯರ್ಥಿ ಬೆಂಬಲಿಸಲು ಮನವಿ

ಎಸ್‌ಯುಸಿಐ ಪಕ್ಷದ ಅಭ್ಯರ್ಥಿ ಪರವಾಗಿ ಹಿರೇಮಠ ಪ್ರಚಾರ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 12:26 IST
Last Updated 10 ಏಪ್ರಿಲ್ 2019, 12:26 IST
ಧಾರವಾಡದ ತೇಗೂರು ಗ್ರಾಮದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಎಸ್‌.ಆರ್.ಹಿರೇಮಠ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು
ಧಾರವಾಡದ ತೇಗೂರು ಗ್ರಾಮದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಎಸ್‌.ಆರ್.ಹಿರೇಮಠ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು   

ಧಾರವಾಡ: ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಿರುವ ಎಸ್‌ಯುಸಿಐ ಕಮ್ಯುನಿಸ್ಟ್ಪಕ್ಷದ ಅಭ್ಯರ್ಥಿಗಂಗಾಧರ ಬಡಿಗೇರ ಅವರ ಪರವಾಗಿ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ ಅವರು ಧಾರವಾಡ ತಾಲ್ಲೂಕಿನ ತೇಗೂರು ಹಾಗೂ ಮುಗಳಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರೇಮಠ, ‘ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಮೂರು ಅವಧಿಗೆ ಸಂಸದರಾಗಿ ಆಯ್ಕೆಯಾದರೂ ನಯಾಪೈಸೆ ಜನಪರ ಕೆಲಸಗಳನ್ನು ಮಾಡಿಲ್ಲ. ಜನಸಾಮಾನ್ಯರು ನೂರಾರು ವರ್ಷಗಳಿಂದ ಬಳಕೆ ಮಾಡುತ್ತಿದ್ದ ಹುಬ್ಬಳ್ಳಿಯ ಜಿಮ್ಖಾನಾ ಮೈದಾನವನ್ನು ಕೆಲವೇ ಕೆಲವರ ಖಾಸಗಿ ಸ್ವತ್ತನ್ನಾಗಿ ಮಾಡುವಲ್ಲಿ ಜೋಶಿ ಅವರ ಕೈವಾಡ ಸಾಕಷ್ಟಿದೆ’ ಎಂದರು.

‘ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದರೂ ಜಿಲ್ಲೆಗೆ ಹೇಳಿಕೊಳ್ಳುವಂತಹ ಕೆಲಸಗಳನ್ನು ಮಾಡಿಲ್ಲ. ತಮ್ಮ ಆಸ್ತಿಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆಯೇ ಹೊರತು ಜನಸಾಮಾನ್ಯರಿಗೆ ಉದ್ಯೋಗ ಸೃಷ್ಟಿ, ಮೂಲಸೌಕರ್ಯಗಳನ್ನು ಕಲ್ಪಿಸಲು ಮುಂದಾಗಿಲ್ಲ. ಉತ್ತಮ ಶಿಕ್ಷಣ ಪಡೆದು ಜನಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿರುವ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಗಂಗಾಧರ ಬಡಿಗೇರ ಅವರಿಗೆ ಮತ ನೀಡುವ ಮೂಲಕ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಪಕ್ಷದ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ‘ಇವತ್ತು ಜನಸಾಮಾನ್ಯರು ನಿರುದ್ಯೋಗ, ಬಡತನದಂತಹ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಇವುಗಳನ್ನು ನಿವಾರಿಸಲು ಯಾವ ಪಕ್ಷಗಳೂ ಗಮನ ಹರಿಸಿಲ್ಲ. ಬದಲಾಗಿ ದೇಶಭಕ್ತಿ, ಸೈನಿಕರ ಬಲಿದಾನದಂತಹ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿವೆ. ಜನಗಳ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಪಕ್ಷದ ಅಭ್ಯರ್ಥಿ ಗಂಗಾಧರ ಅವರನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.