ADVERTISEMENT

ಸಹಕಾರ ಕ್ಷೇತ್ರದಲ್ಲಿ ಬದ್ಧತೆ ಮುಖ್ಯ: ಎನ್‌.ಗಂಗಣ್ಣ

ಬೆಳಗಾವಿ ವಿಭಾಗದ ಎಸ್‌ಸಿ, ಎಸ್‌ಟಿ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 19:34 IST
Last Updated 20 ಜೂನ್ 2019, 19:34 IST
ಹುಬ್ಬಳ್ಳಿಯಲ್ಲಿ ಗುರುವಾರ ಏರ್ಪಡಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಗುರುವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಬಾಪುಗೌಡ ಡಿ.ಪಾಟೀಲ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಗುರುವಾರ ಏರ್ಪಡಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಗುರುವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಬಾಪುಗೌಡ ಡಿ.ಪಾಟೀಲ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಸಹಕಾರ ಸಂಘಗಳಲ್ಲಿ ಹಣ ದುರುಪಯೋಗವಾಗದಂತೆ, ಲೆಕ್ಕಪತ್ರಗಳಲ್ಲಿ ಲೋಪದೋಷಗಳಾಗದಂತೆ ಆಡಳಿತ ಮಂಡಳಿಯ ನಿರ್ದೇಶಕರು, ಸದಸ್ಯರು ಮತ್ತು ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್‌.ಗಂಗಣ್ಣ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಧಾರವಾಡ ಜಿಲ್ಲಾ ಸಹಕಾರ ಯೂನಿಯನ್‌, ಕೆಸಿಸಿ ಬ್ಯಾಂಕ್‌ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಬೆಳಗಾವಿ ವಿಭಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಗುರುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರು ಷೇರು ಹೊಂದಿರದಿದ್ದರೂ ಸಹಕಾರ ಸಂಘದ ಸದಸ್ಯತ್ವ ಹೊಂದಲು ಸರ್ಕಾರ ಅವಕಾಶ ಕಲ್ಪಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ADVERTISEMENT

ರೈತರು ದೇಶದ ಬೆನ್ನೆಲುಬಾಗಿದೆ. ಅವರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುವ ಉದ್ದೇಶದಿಂದ ಸಹಕಾರ ಸಂಘ ಆರಂಭಿಸಲಾಗಿದೆ. ರೈತ ಸಮುದಾಯ ಮೋಸ ಹೋಗದಂತೆ ತಡೆಯ ಬೇಕಿದೆ. ಅವರನ್ನು ಶೋಷಣೆ ಮುಕ್ತವಾಗಿಸಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸಹಕಾರ ಕ್ಷೇತ್ರಕ್ಕೆ 114 ವರ್ಷಗಳ ಇತಿಹಾಸವಿದ್ದು, ಅಂದಾಜು 42 ಸಾವಿರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದ ಜನಸಂಖ್ಯೆಯ ಅರ್ಧದಷ್ಟು ಜನರು ಒಂದಲ್ಲ ಒಂದು ರೀತಿಯಲ್ಲಿ ಸಹಕಾರ ಕ್ಷೇತ್ರದ ಫಲಾನುಭವಿಗಳಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಬಾಪುಗೌಡ ಡಿ.ಪಾಟೀಲ, ಬೆಳಗಾವಿ ವಿಭಾಗದ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ 11,500 ಸಹಕಾರ ಸಂಘಗಳು ಇವೆ. ಇದರಲ್ಲಿ 200 ಎಸ್‌ಸಿ, ಎಸ್‌ಟಿ ಸಹಕಾರ ಸಂಘಗಳಿವೆ. ಆದರೆ, ಕೆಲವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿದರು.

ಸಹಕಾರ ಸಂಘದ ಕಾಯ್ದೆಗಳಲ್ಲಿ ಇತ್ತೀಚೆಗೆ ಆಗಿರುವ ಬದಲಾವಣೆ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.

ರಾಜ್ಯ ಸಹಕಾರಿ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎನ್‌.ಅರುಣಕುಮಾರ ಮಾತನಾಡಿ, ಸಹಕಾರ ಸಂಘಗಳಿಂದ ಕೇವಲ ಸಾಲ ಸೌಲಭ್ಯ ಪಡೆಯುವುದು ಮಾತ್ರವಲ್ಲ. ಮರುಪಾವತಿಗೂ ಆದ್ಯತೆ ನೀಡಬೇಕು. ಆಗ ಮಾತ್ರ ಸಹಕಾರ ಸಂಘಗಳು ಯಶಸ್ವಿಯಾಗುತ್ತವೆ ಎಂದು ಹೇಳಿದರು.

ಮಹಾಮಂಡಳದ ನಿರ್ದೇಶಕರಾದ ಬಿ.ಎಸ್‌.ಸುಲ್ತಾನಪುರಿ, ಶಿವನಗೌಡ ಎಸ್‌.ಬಿರಾದಾರ, ಬೆಳಗಾವಿ ಪ್ರಾಂತ ಸಹಕಾರ ಸಂಘಗಳ ರಿಜಿಸ್ಟ್ರಾರ್ ವೆಂಟಕಸ್ವಾಮಿ, ಧಾರವಾಡ ಕೆಸಿಸಿ ಬ್ಯಾಂಕ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಮುನಿಯಪ್ಪ, ಧಾರವಾಡ ಸಹಕಾರ ಸಂಘಗಳ ರಿಜಿಸ್ಟ್ರಾರ್ ಸಾವಿತ್ರಿ ಬಿ.ಕಡಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪಿ.ವೆಂಟಕೇಶ್‌, ಚಾಮರಾಜ ಸವಡಿ, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯ ನಿರ್ವಾಹಕ ಶರಣಬಸಪ್ಪ ಜಿ.ಕಾಟ್ರಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.