ADVERTISEMENT

ಮೃತ ಬಾಲಕಿ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 9 ಮೇ 2025, 14:48 IST
Last Updated 9 ಮೇ 2025, 14:48 IST
ಸಲೀಂ ಅಹ್ಮದ್
ಸಲೀಂ ಅಹ್ಮದ್   

ಹುಬ್ಬಳ್ಳಿ: ಇತ್ತೀಚೆಗೆ ಅತ್ಯಾಚಾರಕ್ಕೊಳಗಾಗಿ, ಸಾವಿಗೀಡಾದ ಬಾಲಕಿಯ ಮನೆಗೆ ಶುಕ್ರವಾರ ಭೇಟಿ ನೀಡಿದ ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌ ಅವರು ಮುಖ್ಯಮಂತ್ರಿ ಪರವಾಗಿ ₹10 ಲಕ್ಷ ಪರಿಹಾರದ ಚೆಕ್‌ ಅನ್ನು ಬಾಲಕಿಯ ಕುಟುಂಬದ ಸದಸ್ಯರಿಗೆ ನೀಡಿದರು. 

‘ಇಂತಹ ಘಟನೆ ನಡೆಯಬಾರದಿತ್ತು. ಆದರೆ, ದುರದೃಷ್ಟವಶಾತ್‌ ಘಟಿಸಿದೆ. ಕಡುಬಡವರಾಗಿರುವ ಮೃತ ಬಾಲಕಿಯ ಕುಟುಂಬದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದಂತೆ ಪರಿಹಾರ ನೀಡಲಾಗಿದೆ. ಸಾಮಾನ್ಯ ಪ್ರಕರಣಗಳಲ್ಲಿ ₹ 5 ಲಕ್ಷ ಪರಿಹಾರ ನೀಡಲಾಗುತ್ತದೆ. ಆದರೆ, ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಮುಖ್ಯಮಂತ್ರಿ ಅವರು ₹ 10 ಲಕ್ಷ ಪರಿಹಾರ ಘೋಷಿಸಿದ್ದರು’ ಎಂದು ಸುದ್ದಿಗಾರರಿಗೆ ಹೇಳಿದರು. 

‘ಬಾಲಕಿಯ ಕುಟುಂಬದವರಿಗೆ ಮನೆ ನೀಡುವುದಾಗಿ ಶಾಸಕ ಪ್ರಸಾದ ಅಬ್ಬಯ್ಯ ಭರವಸೆ ನೀಡಿದ್ದಾರೆ. ಕುಟುಂಬದ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ’ ಎಂದು ಅವರು ವಿವರಿಸಿದರು. 

ADVERTISEMENT

‘ಇಲ್ಲಿನ ಉಣಕಲ್‌ನಲ್ಲಿ ಸಂಭವಿಸಿದ್ದ ಸಿಲಿಂಡರ್‌ ಸ್ಫೋಟ ಪ್ರಕರಣದಲ್ಲಿ ಸಾವಿಗೀಡಾಗಿದ್ದ 8 ಜನರಿಗೆ ₹ 40 ಪರಿಹಾರ ನೀಡಲಾಗಿದೆ’ ಎಂದು ಹೇಳಿದರು. 

ಪಾಕಿಸ್ತಾನವನ್ನು ಸದೆಬಡಿಯುತ್ತಿರುವ ನಮ್ಮ ಸೈನಿಕರ ನೈತಿಕ ಬಲ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ  ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮರ್‌ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಪಕ್ಷ ಭೇದ ಮರೆತು, ವಿವಿಧ ಪಕ್ಷಗಳ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಕೂಡ ಇದರಲ್ಲಿ ಭಾಗವಹಿಸಿದ್ದರು ಎಂದರು. 

‘ಅವರು (ಪಾಕಿಸ್ತಾನ) ಯುದ್ಧ ಆರಂಭಿಸಿದ್ದಾರೆ. ನಮ್ಮವರು ತಕ್ಕ ಉತ್ತರ ನೀಡುತ್ತಿದ್ದಾರೆ. ಸೈನಿಕರ ಮನೋಬಲ ಹೆಚ್ಚಿಸಲು ಎಲ್ಲ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಹೇಳಿದ್ದೇವೆ. ಗಾಂಧೀಜಿ ಒಂದು ಕಾಪಾಳಕ್ಕೆ ಹೊಡೆದ್ರೆ ಇನ್ನೊಂದು ಕಾಪಾಳ ನೀಡಲು ಹೇಳಿದ್ರು, ಆದರೆ ಅದನ್ನು ಮೀರಿದ್ರೆ ನಾವು ಕಾಪಾಳ ಮೋಕ್ಷ ಮಾಡೋದು ನಮ್ಮ ಧರ್ಮ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಜಿ. ಆರ್.ಜೆ, ಹುಬ್ಬಳ್ಳಿ ಶಹರ ತಹಶೀಲ್ದಾರ್‌ ಕಲಗೌಡ ಪಾಟೀಲ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.