ಹುಬ್ಬಳ್ಳಿ: ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ನೀಡುವ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ‘ಪ್ರಜಾವಾಣಿ’ಯ ಉಪಸಂಪಾದಕ ಸಿದ್ಧನಗೌಡ ಪಾಟೀಲ, ‘ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್’ ಜಾಹೀರಾತು ವಿಭಾಗದ ದಿವಾಕರ ಭಟ್ ಸೇರಿದಂತೆ 35 ಮಂದಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಗೆ 6 ಮಹಿಳೆಯರು ಆಯ್ಕೆಯಾಗಿದ್ದಾರೆ.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ, ‘ವಿವಿಧ ಕ್ಷೇತ್ರಗಳ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜನವರಿ 26ರಂದು ಸಂಜೆ 6 ಗಂಟೆಗೆ ಚನ್ನಮ್ಮ ವೃತ್ತದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ’ ಎಂದರು.
‘ಅಂದು ಮಧ್ಯಾಹ್ನ 2 ಗಂಟೆಗೆ ಬಾದಾಮಿಯ ಶ್ರೀನಿವಾಸ ದುರ್ಗಪ್ಪ ಮಾದರ ಅವರು ಸಂಗ್ರಾಣಿ ಕಲ್ಲು ಎತ್ತುವರು. ಸಿದ್ಧಾರೂಢ ಹೂಗಾರ ತಂಡದವರು ಮಲ್ಲಕಂಬ ಪ್ರದರ್ಶನ ನೀಡುವರು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಪಾಲ್ಗೊಳ್ಳುವರು’ ಎಂದು ತಿಳಿಸಿದರು.
‘ಹುಬ್ಬಳ್ಳಿ ಸೇರಿದಂತೆ ರಾಜ್ಯದ ನಾಲ್ಕು ವಿಮಾನನಿಲ್ದಾಣಗಳಿಗೆ ಮಹನೀಯರ ಹೆಸರಿಡುವ ಕುರಿತು ಜ.26ರಂದು ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸದಿದ್ದರೆ, ಮುಂದಿನ ಹೋರಾಟದ ರೂಪುರೇಷೆಗಳನ್ನು ಇದೇ ಕಾರ್ಯಕ್ರಮದಲ್ಲಿ ಘೋಷಿಸಲಾಗುವುದು’ ಎಂದು ಹೇಳಿದರು.
ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ತಾಲೂರ, ವಿಜಯಕುಮಾರ ಅಪ್ಪಾಜಿ, ಗುರು ಚಲವಾದಿ, ಜಗದೀಶ ರಿತ್ತಿ, ಅಬ್ದುಲ್ ಮುನಾಫ್ ಐನಾಪುರ ಇದ್ದರು.