
ಧಾರವಾಡದಲ್ಲಿ ಶಾಲಾ ಮಕ್ಕಳನ್ನು ಒಯ್ಯುವ ಆಟೊ ರಿಕ್ಷಾವೊಂದರ ಹೊರಭಾಗದಲ್ಲಿ ಬ್ಯಾಗುಗಳನ್ನು ನೇತು ಹಾಕಿರುವುದು, ಚಾಲಕನ ಪಕ್ಕದ ಕಂಬಿ ಮೇಲೆ ವಿದ್ಯಾರ್ಥಿ ಕುಳಿತಿರುವುದು
ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡ: ನಿಗದಿತ ಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ವಾಹನಗಳಲ್ಲಿ (ಒಮ್ನಿ ವ್ಯಾನ್, ಆಟೊ ರಿಕ್ಷಾ...) ಕರೆದೊಯ್ಯುತ್ತಿರುವ ದೃಶ್ಯ ಪ್ರತಿ ದಿನವೂ ಸಾಮಾನ್ಯವಾಗಿದ್ದು, ಅವರ ಸುರಕ್ಷತೆ ಬಗ್ಗೆ ಪೋಷಕರು ಆತಂಕಗೊಂಡಿದ್ದಾರೆ. ನಿಯಮ ಉಲ್ಲಂಘನೆ ಜೊತೆಗೆ ಪ್ರಯಾಣದ ವೇಳೆ ಮಕ್ಕಳಿಗೆ ಅಪಾಯ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಅವರಿಗೆ ಕಾಡುತ್ತಿದೆ.
ನಗರದಲ್ಲಿ ಬಹಳಷ್ಟು ಶಿಕ್ಷಣ ಸಂಸ್ಥೆಗಳಿವೆ. ಹಲವು ಮಕ್ಕಳು ಶಾಲಾ ವಾಹನಗಳಲ್ಲಿ ಪ್ರಯಾಣಿಸಿದರೆ, ಇನ್ನೂ ಕೆಲವರು ಒಮ್ನಿ ವ್ಯಾನ್, ಆಟೊ ರಿಕ್ಷಾಗಳಲ್ಲಿ ಸಂಚರಿಸುತ್ತಾರೆ. ಈ ಪೈಕಿ ಹಲವು ವಾಹನ ಚಾಲಕರು ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚು ಮಕ್ಕಳನ್ನು ವಾಹನಗಳಲ್ಲಿ ಒಯ್ಯುತ್ತಾರೆ. ರಿಕ್ಷಾಗಳ ಇಬ್ಬದಿಗಳಲ್ಲಿ ಕಂಬಿಗಳಿಗೆ ಬ್ಯಾಗುಗಳು ನೇತು ಬಿದ್ದಿರುತ್ತವೆ. ರಿಕ್ಷಾದ ಕಂಬಿಗಳ ಮೇಲೆ, ಚಾಲಕನ ಸೀಟಿನಲ್ಲೇ ಆತನ ಎಡಬಲ ಬದಿಯಲ್ಲಿ ಮಕ್ಕಳು ಕೂತಿರುತ್ತಾರೆ.
ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್‌ಗೆ ಕರೆ ಬಂದರೆ ಕೆಲವು ಚಾಲಕರು ಸ್ವೀಕರಿಸಿ, ಕಿವಿಗಿಟ್ಟುಕೊಂಡು ಮಾತನಾಡುತ್ತಲೇ ಚಲಾಯಿಸುತ್ತಾರೆ. ಚಾಲಕರ ಈ ಚಾಳಿಗೆ ಕಡಿವಾಣ ಬಿದ್ದಿಲ್ಲ ಎಂದು ಪೋಷಕರು ಆರೋಪಿಸುತ್ತಾರೆ.
‘ಆಟೊ ರಿಕ್ಷಾ, ವ್ಯಾನ್ ಸಹಿತ ಯಾವುದೇ ವಾಹನಗಳ ಹೊರ ಭಾಗದಲ್ಲಿ ಬ್ಯಾಗು, ಇತರ ವಸ್ತುಗಳನ್ನು ಇಡುವಂತಿಲ್ಲ. ಪಕ್ಕದಲ್ಲಿ ವಾಹನಕ್ಕೆ ತಗಲಿ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತವೆ. ಶಾಲಾ ಮಕ್ಕಳನ್ನು ಕರೆದೊಯ್ಯವ ಆಟೊ ರಿಕ್ಷಾಗಳ ಹೊರಭಾಗದಲ್ಲಿ ಬ್ಯಾಗಗಳು ಜೋತು ಬಿದ್ದಿರುತ್ತವೆ. ನಿಗದಿಗಿಂತ ಹೆಚ್ಚು ಮಕ್ಕಳನ್ನು ತುಂಬಿರುತ್ತಾರೆ. ಅಪಘಾತ ಸಂಭವಿಸಿದಾಗ ಪೊಲೀಸರು ಎಚ್ಚೆತ್ತುಕೊಳ್ಳುತ್ತಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿ ಸುಮ್ಮನಾಗುತ್ತಾರೆ’ ಎಂದು ನಿವೃತ್ತ ನ್ಯಾಯಾಧೀಶ ಸಂಗಪ್ಪ ಮಿತ್ತಲಕೊಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ಯಾವ್ಯಾವ ವಾಹನದಲ್ಲಿ (ಸಾಮರ್ಥ್ಯ ಆಧರಿಸಿ) ಎಷ್ಟು ಮಕ್ಕಳನ್ನು ಒಯ್ಯಬೇಕು ಎಂದು ನಿಗದಿಪಡಿಸಲಾಗಿದೆ. ರಿಕ್ಷಾದಲ್ಲಿ ಐದು ಮಕ್ಕಳನ್ನು ಒಯ್ಯಲು ಅವಕಾಶ ಇದೆ. ಆದರೆ, ನಿಯಮ ಪಾಲನೆಯಾಗುತ್ತಿಲ್ಲ. ಮನೆಯಿಂದ ಶಾಲೆ ಎರಡು ಕಿಲೋ ಮೀಟರ್ ದೂರ ಇದೆ. ಮಕ್ಕಳು ಶಾಲೆಗೆ ಹೋಗಿಬರಲು ಆಟೊ ರಿಕ್ಷಾ ವ್ಯವಸ್ಥೆ ಮಾಡಿದ್ದೇವೆ. ನಿಗದಿಯಷ್ಟೇ ಮಕ್ಕಳನ್ನು ಕರೆದೊಯ್ದರೆ ಬಾಡಿಗೆ ಗಿಟ್ಟುವುದಿಲ್ಲ ಎಂದು ರಿಕ್ಷಾದವರು ಹೇಳುತ್ತಾರೆ. ಬಾಡಿಗೆ ಹೆಚ್ಚು ಕೇಳುತ್ತಾರೆ’ ಎಂದು ಪೋಷಕಿಯೊಬ್ಬರು ತಿಳಿಸಿದರು.
ನಿಗದಿಗಿಂತ ಹೆಚ್ಚು ಮಕ್ಕಳನ್ನು ಒಯ್ಯುವ ವಾಹನಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಲಾಗುವುದು. ನಿಯಮ ಉಲ್ಲಂಘನೆಗೆ ₹ 5 ಸಾವಿರ ನಿಗದಿಗಿಂತ ಹೆಚ್ಚು ಮಕ್ಕಳು ಇದ್ದರೆ ತಲಾ ₹ 200 ದಂಡ ವಿಧಿಸಲಾಗುತ್ತದೆಶ್ರೀಧರ್ ಮಲ್ಲೊಡಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಧಾರವಾಡ
ಕೆಲವು ಹಳೆಯ ವ್ಯಾನ್‌ಗಳಲ್ಲಿ ಮಕ್ಕಳನ್ನು ಕರೆದೊಯ್ಯುತ್ತಾರೆ. ಚಾಲಕರು ಯದ್ವಾತದ್ವಾ ವಾಹನ ಚಲಾಯಿಸುತ್ತಾರೆ. ಪೋಷಕರು ಶಾಲೆಯವರು ಶಿಕ್ಷಣ ಇಲಾಖೆಯವರು ಪೊಲೀಸರು ನಿಗಾ ಇಡಬೇಕುಉದಯ ದೇಸಾಯಿ, ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.