
ಅಳ್ನಾವರ: ಕಳೆದೆರಡು ದಿನಗಳ ಹಿಂದೆ ದೆಹಲಿಯ ಕೆಂಪು ಕೋಟೆಯ ಬಳಿ ಸಂಭವಿಸಿದ ಕಾರು ಸ್ಪೋಟ ಘಟನೆಯ ಪ್ರಯುಕ್ತ ಎಲ್ಲೆಡೆ ಕಟ್ಟೆಚ್ಚರ ವಹಿಸಬೇಕೆಂಬ ಸೂಚನೆಯ ಹಿನ್ನೆಲೆಯಲ್ಲಿ ಬುಧವಾರ ಪೊಲೀಸರು ಶ್ವಾನ ದಳದೊಂದಿಗೆ ಇಲ್ಲಿನ ರೈಲು ನಿಲ್ದಾಣ ಸೇರಿದಂತೆ ವಿವಿಧೆಡೆ ತಪಾಸಣೆ ನಡೆಸಿದರು.
ಇಲ್ಲಿನ ರೈಲು ನಿಲ್ದಾಣ ದಟ್ಟಣೆಯಿಂದ ಕೂಡಿರುತ್ತದೆ ಮತ್ತು ದೇಶದ ವಿವಿಧೆಡೆಗಳಿಂದ ಪ್ರಯಾಣಿಕರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುವುದರಿಂದ ಮುಂಜಾಗ್ರತೆ ದೃಷ್ಟಿಯಿಂದ ತಪಾಸಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.
ಮಹಾರಾಷ್ಟ್ರ ಮತ್ತು ಗೋವಾ ಗಡಿಗಳಿಗೆ ಸಮೀಪದಲ್ಲಿರುವ ಸ್ಥಳೀಯ ರೈಲು ನಿಲ್ದಾಣಕ್ಕೆ ನಿತ್ಯ ಅನೇಕ ಅಪರಿಚಿತರು ಬಂದು ಹೋಗುತ್ತಾರೆ. ರಾತ್ರಿ ಸಮಯದಲ್ಲಿ ಗೋವಾ ಮೂಲಕ ಆಗಮಿಸುವ ಪ್ರಯಾಣಿಕರಿಗೆ ಯಾವುದೇ ಭದ್ರತೆ ಇಲ್ಲದಾಗಿದೆ. ನಿಲ್ದಾಣದಲ್ಲಿ ಪೊಲೀಸರ ನಿಯೋಜನೆ ಮಾಡುವಂತೆ ಸಾರ್ವಜನಿಕರು ರೈಲ್ವೆ ಇಲಾಖೆಗೆ ಈಚೆಗೆ ಆಗ್ರಹ ಮಾಡಿದ್ದರು ಎಂದು ರೈಲು ಬಳಕೆದಾರರ ಸಂಘದ ಸದಸ್ಯ ಪ್ರವೀಣ ಪವಾರ ತಿಳಿಸಿದರು.
ಅನೇಕ ವರ್ಷಗಳ ಹಿಂದೆ ಅಳ್ನಾವರ ಸುತ್ತಮುತ್ತಲಿನ ಅರಣ್ಯ ಭಾಗದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ಮಾತುಗಳು ಕೇಳಿ ಬಂದಾಗ ಗುಪ್ತಚರ ವಿಭಾಗದವರು ಎಲ್ಲೆಡೆ ನಿಗಾ ಇಟ್ಟಿದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.