ಅಣ್ಣಿಗೇರಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಣ್ಣಿಗೇರಿ ತಾಲ್ಲೂಕು ಘಟಕದ ಪ್ರಥಮ ಶರಣ ಸಾಹಿತ್ಯ ಸಮ್ಮೇಳನವು ಅ.6ರಂದು (ಸೋಮವಾರ) ತಾಲ್ಲೂಕಿನ ಅಡ್ನೂರು ಗ್ರಾಮದಲ್ಲಿ ನಡೆಯಲಿದೆ.
ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಂ ಯಲಬುರ್ಗಿ ಮಾತನಾಡಿ, ‘ಅಡ್ನೂರು ಗ್ರಾಮದವರೇ ಆದ ಪಂಡಿತ್ ಎಂ. ಕಲ್ಲಿನಾಥಶಾಸ್ತ್ರಿ ಅವರು ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸುವರು’ ಎಂದರು.
ಚಂದ್ರಶೇಖರ ಕೊಟ್ಟೂರ ಧ್ವಜಾರೋಹಣ ನೆರವೇರಿಸುವರು. ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಗದಗಿನ ತೋಂಟದ ಸಿದ್ದರಾಮ ಸ್ವಾಮೀಜಿ, ತಂಗಡಗಿ ಅನ್ನದಾನ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಶಾಸಕ ಎನ್.ಎಚ್.ಕೋನರಡ್ಡಿ ಅಧ್ಯಕ್ಷತೆ ವಹಿಸುವರು. ಪರಿಷತ್ತಿನ ಅಧ್ಯಕ್ಷ ಸಿ.ಸೋಮಶೇಖರ ಸಮ್ಮೇಳನ ಉದ್ಘಾಟಿಸುವರು. ಶಾಸಕ ಸಿ.ಸಿ.ಪಾಟೀಲ, ಕುಸುಮಾವತಿ ಶಿವಳ್ಳಿ, ಅಬ್ದುಲ್ ಖಾದರ್ ನಡಕಟ್ಟಿನ ಪಾಲ್ಗೊಳ್ಳಲಿದ್ದಾರೆ.
ವಕೀಲ ಸಿ.ಎಸ್.ಪಾಟೀಲ ಪರಿವಾರ ತಮ್ಮ ಅಜ್ಜ ಬಸನಗೌಡ ಪಾಟೀಲ ಅವರ ಸ್ಮರಣೆಯ ನಿಮಿತ್ಯ ಸಮ್ಮೇಳನದ ದಾಸೋಹ ಸೇವೆ ವಹಿಸಿಕೊಂಡಿದ್ದಾರೆ ಎಂದರು.
ಎ.ಎಂ.ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯುವ ಮೊದಲ ಚಿಂತನ ಗೋಷ್ಠಿಯಲ್ಲಿ ಧಾರವಾಡದ ಬಸವರಾಜ ನಾಗವ್ವನವರ ಹಾಗೂ ಅಣ್ಣಿಗೇರಿಯ ಶಾಂತಾ ಲಕ್ಷ್ಮೇಶ್ವರ ಕ್ರಮವಾಗಿ ಅಲಕ್ಷಿತ ವಚನಕಾರ ಹಾಗೂ ವಚನಕಾರ್ತಿಯರು ವಿಷಯ ಕುರಿತು ಉಪನ್ಯಾಸ ನೀಡುವರು.
ಪ್ರೊ.ಸಿ.ಎಸ್.ಹೊಸಮಠ ಅವರ ಅಧ್ಯಕ್ಷತೆಯಲ್ಲಿ ಎರಡನೇ ಚಿಂತನಗೋಷ್ಠಿ ನಡೆಯಲಿದೆ. ಗದಗಿನ ಶರಣಬಸವ ವೆಂಕಟಾಪೂರ ಸಾಂಸ್ಕೃತಿಕ ನಾಯಕ ಬಸವಣ್ಣ, ಹುಲಕೋಟಿಯ ಆರ್. ಎಂ.ಕಲ್ಲನಗೌಡ ಅವರು ಅಡ್ನೂರಿನ ಶರಣ ಜೀವಿ ಬಸನಗೌಡರು ಪಾಟೀಲ ಅವರ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಶರಣಬಸಪ್ಪನವರು ದೇಶಮುಖ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಉಪ್ಪಿನ ಬೆಟಿಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಮೊಮ್ಮಗಳಾದ ಪ್ರಭಾವತಿ ರಬರಬಿ ಅವರಿಗೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ‘ಶರಣಶ್ರೀ ಪ್ರಶಸ್ತಿ’ ಪ್ರದಾನ ಮಾಡುವರು. ಪರಿಷತ್ತಿನ ಜಿಲ್ಲಾಧ್ಯಕ್ಷ ಸಂಗಮನಾಥ ಲೋಕಾಪೂರ, ಶಂಭು ಹೆಗಡಾಳ, ಪಿ.ಎಚ್.ನೀರಲಕೇರಿ, ಹೋಳಿಯಪ್ಪ ಯಾದವಾಡ, ಚಂದ್ರಶೇಖರ ದಾಡಿಬಾಯಿ ಮತ್ತಿತರರು ಭಾಗವಹಿಸುವರು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.