ಹುಬ್ಬಳ್ಳಿ: ಕೃಷಿಯನ್ನಷ್ಟೇ ಅವಲಂಬಿಸದೆ ಉಪ ಕಸುಬುಗಳ ಮೂಲಕ ನಿರಂತರ ಆದಾಯ ಕಂಡುಕೊಳ್ಳುತ್ತಿದ್ದಾರೆ ನವಲಗುಂದ ತಾಲ್ಲೂಕಿನ ಮೊರಬ ಗ್ರಾಮದ ಪ್ರಗತಿಪರ ರೈತ ಗಂಗಪ್ಪ ಕಾಲವಾಡ.
ಪಿಯುಸಿ ವರೆಗೆ ಓದಿರುವ 43 ವರ್ಷದ ಈ ರೈತ, ಕಳೆದ 20 ವರ್ಷಗಳಿಂದ ತಮ್ಮ 4 ಎಕರೆ ಒಣಭೂಮಿ ಮತ್ತು ನೀರಾವರಿ ಜಮೀನಿನಲ್ಲಿ ಕೃಷಿ ಕಾಯಕ ಮಾಡುತ್ತ ಬಂದಿದ್ದಾರೆ. ಸದ್ಯ ನಾಲ್ಕು ಎಕರೆಯಲ್ಲಿ ಜವಾರಿ ತಳಿಯ ಹೆಸರು ಬೆಳೆ ಬೆಳೆದಿದ್ದಾರೆ. ಇನ್ನುಳಿದ ನಾಲ್ಕು ಎಕರೆ ಜಮೀನಿನಲ್ಲಿ 6 ಬಗೆಯ ಮೇವು ಬೆಳೆದಿದ್ದಾರೆ. ಕುರಿ ಸಾಕಾಣಿಕೆಗೆ 30 ಅಡಿ ಅಗಲ 200 ಅಡಿ ಉದ್ದದ ಹೈಟೆಕ್ ಶೆಡ್ ನಿರ್ಮಿಸಿಕೊಂಡಿದ್ದಾರೆ. ಕೋಳಿ ಸಾಕಾಣಿಕೆ ಜೊತೆಗೆ 2 ಎತ್ತು, 4 ಆಕಳು, 1 ಎಮ್ಮೆಯನ್ನೂ ಸಾಕಿಕೊಂಡಿದ್ದಾರೆ.
ಕುರಿ ಸಾಕಾಣಿಕೆಗೆ ಸರ್ಕಾರದಿಂದ ಸಹಾಯಧನ ಪಡೆದಿದ್ದು, ಕಳೆದ 2 ವರ್ಷಗಳಿಂದ ಕುರಿ ಸಾಕಾಣಿಕೆ, ಬ್ರೀಡಿಂಗ್ ಮಾಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಅಮೀನಗಡ ತಾಲ್ಲೂಕಿನ ಎಳಗ ತಳಿಯ 200 ಕುರಿಗಳನ್ನು ₹12 ಸಾವಿರದಿಂದ ₹15 ಸಾವಿರ ನೀಡಿ ಖರೀದಿಸಿದ್ದರು. ಇದೀಗ ಇವರ ಬಳಿ 550 ಕುರಿಗಳಿವೆ. ಎರಡೂವರೆ, ಮೂರು ತಿಂಗಳ ಕಾಲ ಬೆಳೆಸಿದ ಮರಿಗಳನ್ನು ₹6 ಸಾವಿರದಿಂದ ₹8 ಸಾವಿರಕ್ಕೆ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಹಾಸನ, ಮಂಡ್ಯ ಭಾಗದ ಜನರೂ ಖರೀದಿಗೆ ಬರುತ್ತಾರೆ.
‘ವರ್ಷಕ್ಕೆ ಅಂದಾಜು 700 ಮರಿಗಳನ್ನು ಮಾರಾಟ ಮಾಡಿದ್ದೇವೆ. ಇದರಿಂದ ಅಂದಾಜು ₹49 ಲಕ್ಷ ಆದಾಯ ಪಡೆದಿದ್ದೇವೆ. ಕುರಿ ಗೊಬ್ಬರಕ್ಕೂ ಹೆಚ್ಚಿನ ಬೇಡಿಕೆ ಇದ್ದು, ಒಂದು ಬ್ರಾಸ್‌ಗೆ (10 ಅಡಿ ಅಗಲ, 10 ಅಡಿ ಉದ್ದ ಮತ್ತು ಒಂದು ಅಡಿ ಆಳ) ₹6,250 ದರವಿದೆ. ಭೂಮಿಯ ಫಲವತ್ತತೆ ಹೆಚ್ಚಳ ಮತ್ತು ಉಷ್ಣ ಪರಿಣಾಮ ಬೀರುವುದರಿಂದ ಮಲೆನಾಡಿನ ಅಡಿಕೆ ಬೆಳೆಗಾರರು ಈ ಗೊಬ್ಬರವನ್ನು ಹೆಚ್ಚಾಗಿ ಖರೀದಿಸುತ್ತಾರೆ. ಕುರಿ ಗೊಬ್ಬರ ಮಾರಾಟದಿಂದಲೂ ತಿಂಗಳಿಗೆ ಅಂದಾಜು ₹1 ಲಕ್ಷ ಆದಾಯವಿದೆ. ನಮ್ಮ ಜಮೀನಿಗೂ ಇದೇ ಗೊಬ್ಬರ ಬಳಸುವುದರಿಂದ ರಾಸಾಯಿಕ ಗೊಬ್ಬರದ ಅವಲಂಬನೆ ಕಡಿಮೆ ಆಗಿದೆ’ ಎಂದು ಪ್ರಗತಿಪರ ರೈತ ಗಂಗಪ್ಪ ಕಾಲವಾಡ ‘ಪ್ರಜಾವಾಣಿ‘ಗೆ ತಿಳಿಸಿದರು.
ಕೋಳಿ ಸಾಕಾಣಿಕೆ: ‘ಐದು ವರ್ಷಗಳಿಂದ ಕೋಳಿ ಸಾಕಾಣಿಕೆ ಮಾಡಿಕೊಂಡಿದ್ದು, ಸದ್ಯ 200 ಜವಾರಿ ಕೋಳಿಗಳಿವೆ. ₹20ಕ್ಕೆ ಒಂದರಂತೆ ದಿನಕ್ಕೆ 50 ರಿಂದ 60 ಮೊಟ್ಟೆಗಳನ್ನು ಮಾರಾಟ ಮಾಡುತ್ತೇವೆ’ ಎಂದು ಹೇಳಿದರು.
ಕೃಷಿ ಮಾಡಲು ತಾಳ್ಮೆ ಬೇಕು. ಸರ್ಕಾರದ ಯೋಜನೆಗಳ ಸದ್ಬಳಕೆ ಜೊತೆಗೆ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿ ಉಪ ಕಸುಬುಗಳನ್ನು ಮಾಡಿಕೊಂಡರೆ ಆದಾಯ ಪಡೆಯಬಹುದುಗಂಗಪ್ಪ ಕಾಲವಾಡ ಪ್ರಗತಿಪರ ರೈತ ಮೊರಬ
ಮಳೆ ನೀರು ಕೊಯ್ಲಿಗೆ ಒತ್ತು ಪ್ರಗತಿಪರ ರೈತ ಗಂಗಪ್ಪ ಕಾಲವಾಡ ಅವರು 50X50X10 ಅಳತೆಯ ಕೃಷಿ ಹೊಂಡವನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಂಡಿದ್ದು ಕುರಿ ಸಾಕಾಣಿಕೆಯ ಶೆಡ್ ಮೇಲೆ ಬೀಳುವ ಮಳೆ ನೀರು ನೇರವಾಗಿ ಕೃಷಿ ಹೊಂಡದಲ್ಲಿ ಬೀಳುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮೀನು ಸಾಕಾಣಿಕೆ ಇಲಾಖೆಯಿಂದ 5000ಕ್ಕೂ ಅಧಿಕ ಮೀನುಮರಿಗಳನ್ನು ಉಚಿತವಾಗಿ ಪಡೆದಿದ್ದು ಕಳೆದ ಕೆಲ ದಿನಗಳಿಂದ ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆಯನ್ನೂ ಆರಂಭಿಸಿದ್ದಾರೆ. ವಿದ್ಯುತ್ ಅವಲಂಬಿಸದೇ ಮನೆಗೆ ಹಾಗೂ ಜಮೀನಿನ ಕೆಲಸಗಳಿಗೆ ಸೋಲಾರ ದೀಪಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.