ADVERTISEMENT

ಮಕ್ಕಳಿಗೆ ಉತ್ತಮ ಕಲಿಕೆ ವಾತಾವರಣ ಅಗತ್ಯ

ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 14:37 IST
Last Updated 28 ನವೆಂಬರ್ 2019, 14:37 IST
ಅರ್ಲಿಸ್ಪಾರ್ಕ್ ಇನಿಶಿಯೇಟಿವ್ ಕಾರ್ಯಕ್ರಮದಡಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಅತಿಥಿಗಳು ಪ್ರಮಾಣ ಪತ್ರ ವಿತರಿಸಿದರು
ಅರ್ಲಿಸ್ಪಾರ್ಕ್ ಇನಿಶಿಯೇಟಿವ್ ಕಾರ್ಯಕ್ರಮದಡಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಅತಿಥಿಗಳು ಪ್ರಮಾಣ ಪತ್ರ ವಿತರಿಸಿದರು   

ಹುಬ್ಬಳ್ಳಿ: ‘ಮಕ್ಕಳಿಗೆ ಉತ್ತಮ ಕಲಿಕೆ ವಾತಾವರಣವನ್ನು ಸೃಷ್ಟಿಸಬೇಕು. ಆಗ ಮಾತ್ರ, ಅವರು ಪ್ರತಿಭಾನ್ವಿತರಾಗಿ ದೇಶದ ಆಸ್ತಿಯಾಗುತ್ತಾರೆ’ ಎಂದು ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅಭಿಪ್ರಾಯಪಟ್ಟರು.

ನಗರದಲ್ಲಿ ಗುರುವಾರ ದೇಶಪಾಂಡೆ ಫೌಂಡೇಷನ್‌ನ ‘ಅರ್ಲಿಸ್ಪಾರ್ಕ್ ಇನಿಶಿಯೇಟಿವ್’ ಕಾರ್ಯಕ್ರಮದಡಿ ತರಬೇತಿ ಪಡೆದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಪ್ರದಾನ ಹಾಗೂ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶೈಕ್ಷಣಿಕ ಸೌಲಭ್ಯಗಳ ಜತೆಗೆ, ಕಲಿಕೆ ವಾತಾವರಣವೂ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಉತ್ತಮ ಶಿಕ್ಷಣ ಪಡೆಯುವುದು ಪ್ರತಿ ಮಗುವಿನ ಹಕ್ಕು. ಆ ಹಕ್ಕಿಗೆ ಧಕ್ಕೆಯಾಗದಂತೆ ಅಗತ್ಯ ಸೌಲಭ್ಯ ಒದಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ’ ಎಂದರು.

ADVERTISEMENT

‘ದೇಶಪಾಂಡೆ ಫೌಂಡೇಷನ್‌ನಲ್ಲಿ ಕೇವಲ ಮೂರು ತರಬೇತಿ ಪಡೆದ ಮಕ್ಕಳು, ಯಾವುದೇ ಭಯವಿಲ್ಲದ ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿರುವುದು ಅವರಲ್ಲಿರುವ ಕಲಿಕೆಯ ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಶಾಲೆಗಳಲ್ಲಿ ಇದೇ ರೀತಿಯ ತರಬೇತಿ, ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಸಿಕ್ಕರೆ, ನಮ್ಮ ಮಕ್ಕಳ ಭವಿಷ್ಯವೇ ಬದಲಾಗಲಿದೆ’ ಎಂದು ಹೇಳಿದರು.

ದೇಶಪಾಂಡೆ ಫೌಂಡೇಷನ್ ಸ್ಥಾಪಕ ಡಾ. ಗುರುರಾಜ ದೇಶಪಾಂಡೆ ಮಾತನಾಡಿ, ‘ಬದ್ಧತೆ ಇದ್ದರೆ ಮಾಡುವ ಕೆಲಸದಲ್ಲಿ ಯಶಸ್ಸು ಖಚಿತ. ಅದಕ್ಕೆ, ನಮ್ಮ ಫೌಂಡೇಷನ್‌ನಲ್ಲಿ ತರಬೇತಿ ಪಡೆದಿರುವ ಮಕ್ಕಳೇ ನಿದರ್ಶನ’ ಎಂದರು.

ಶ್ರೀನಿವಾಸ ದೇಶಪಾಂಡೆ, ಶಿಕ್ಷಣ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಉಮೇಶ ಬೊಮ್ಮಕ್ಕನವರ, ದೇಶಪಾಂಡೆ ಫೌಂಡೇಷನ್‌ ಸಹ ಸಂಸ್ಥಾಪಕರಾದ ಡಾ. ಜಯಶ್ರೀ ದೇಶಪಾಂಡೆ, ಫೌಂಡೇಷನ್‌ ಸಿಇಒ ವಿವೇಕ ಪವಾರ ಹಾಗೂ ಅರ್ಲಿಸ್ಪಾರ್ಕ್ ಇನಿಶಿಯೇಟಿವ್‌ ಸ್ಥಾಪಕಿ ಸ್ಮಿತಾ ದೇಶಪಾಂಡೆ ಇದ್ದರು.

ಅರ್ಲಿಸ್ಪಾರ್ಕ್ ಇನಿಶಿಯೇಟಿವ್‌ ಕಾರ್ಯಕ್ರಮದಡಿ ತರಬೇತಿ ಪಡೆದ, ನಗರದ 8 ಸರ್ಕಾರಿ ಶಾಲೆಗಳ 412 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಮಕ್ಕಳಿಗೆ ಸಹಕಾರ ನೀಡಿದ 16 ಶಿಕ್ಷಕರನ್ನು ಅತಿಥಿಗಳು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.