ADVERTISEMENT

ಹುಬ್ಬಳ್ಳಿ: ‘ಅಂತರರಾಜ್ಯಗಳ ಸಂಸ್ಕೃತಿ ಅರಿವು ಅವಶ್ಯಕ’

ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳ ಸಂವಾದದಲ್ಲಿ ಶಾಸಕ ಜಗದೀಶ ಶೆಟ್ಟರ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 6:50 IST
Last Updated 9 ಫೆಬ್ರುವರಿ 2023, 6:50 IST
ಹುಬ್ಬಳ್ಳಿಗೆ ಭೇಟಿ ನೀಡಿರುವ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳೊಂದಿಗೆ ಶಾಸಕ ಜಗದೀಶ ಶೆಟ್ಟರ್ ಹುಬ್ಬಳ್ಳಿಯಲ್ಲಿ ಬುಧವಾರ ಸಂವಾದ ನಡೆಸಿದರು. ಸಚಿವ ಶಂಕರಪಾಟೀಲ ಮುನೇನಕೊಪ್ಪ, ಡಾ. ಶ್ರೀನಿವಾಸ ಜೋಶಿ ಇದ್ದಾರೆ– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಗೆ ಭೇಟಿ ನೀಡಿರುವ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳೊಂದಿಗೆ ಶಾಸಕ ಜಗದೀಶ ಶೆಟ್ಟರ್ ಹುಬ್ಬಳ್ಳಿಯಲ್ಲಿ ಬುಧವಾರ ಸಂವಾದ ನಡೆಸಿದರು. ಸಚಿವ ಶಂಕರಪಾಟೀಲ ಮುನೇನಕೊಪ್ಪ, ಡಾ. ಶ್ರೀನಿವಾಸ ಜೋಶಿ ಇದ್ದಾರೆ– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಅಂತರರಾಜ್ಯಗಳ ಭೇಟಿಯಿಂದ ಸಾಂಸ್ಕೃತಿಕ ವಿನಿಮಯ ಸಾಧ್ಯ. ಸಂಸ್ಕೃತಿ, ಭಾಷೆ, ಜನಜೀವನ, ಆಹಾರ ವೈವಿಧ್ಯತೆ, ಭೌಗೋಳಿಕ ವಿಶೇಷತೆ ಸೇರಿದಂತೆ ಹಲವು ವಿಷಯಗಳನ್ನು ವಿದ್ಯಾರ್ಥಿಗಳು ಅರಿಯಬೇಕು. ಈ ನಿಟ್ಟಿನಲ್ಲಿ ಸೇಯ್ಲ್ (ವಿದ್ಯಾರ್ಥಿಗಳ ಅಂತರ ರಾಜ್ಯ ಜೀವನ ದರ್ಶನ) ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ’ ಎಂದು ಶಾಸಕ‌‌ ಜಗದೀಶ ಶೆಟ್ಟರ್ ಹೇಳಿದರು.

ರಾಷ್ಟ್ರೀಯ ಏಕಾತ್ಮಕ ಯಾತ್ರೆ –2023 ಅಂಗವಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿಗಳ ಅಂತರರಾಜ್ಯ ಜೀವನ ದರ್ಶನ ಆಯಾಮದ ಭಾಗವಾಗಿ, ಹುಬ್ಬಳ್ಳಿಗೆ ಭೇಟಿ ನೀಡಿರುವ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳೊಂದಿಗೆ ಬುಧವಾರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

‘ನಾನು ಸಹ ಎಬಿವಿಪಿ ಹಿನ್ನೆಲೆಯವನು. ವಿದ್ಯಾರ್ಥಿ ದೆಸೆಯಿಂದಲೂ ಪರಿಷತ್ ಜೊತೆಗೆ ನಂಟಿದೆ. ನಾಯಕತ್ವ, ಭಾರತೀಯತೆ ಬಗ್ಗೆ ಅಭಿಮಾನ ಮೂಡಿಸುವುದು ಸೇರಿದಂತೆ ಹಲವು ವಿಷಯಗಳನ್ನು ಪರಿಷತ್ ಕಲಿಸಿ ಕೊಡುತ್ತದೆ. ನನ್ನಲ್ಲಿ ನಾಯಕತ್ವ ಬೆಳೆಸಿದ್ದು ಎಬಿವಿಪಿ. ಅದರಿಂದಲೇ ರಾಜಕಾರಣಿಯಾಗಿ ರೂಪುಗೊಂಡೆ. ಆರು ಬಾರಿ ಶಾಸಕನಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿ, ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದೆ’ ಎಂದು ವಿದ್ಯಾರ್ಥಿಗಳ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

ಜವಳಿ ಸಚಿವ ಶಂಕರಪಾಟೀಲ‌ ಮುನೇನಕೊಪ್ಪ ಮಾತನಾಡಿ, ‘ದೇಶ, ಸಂಸ್ಕೃತಿ, ಧರ್ಮ, ರಾಷ್ಟ್ರೀಯತೆ ಕುರಿತು ಎಬಿವಿಪಿ ಅರಿವು ಮೂಡಿಸುತ್ತದೆ. ನಿಸ್ವಾರ್ಥವಾಗಿ ಸಮಾಜ ಹಾಗೂ ದೇಶಕ್ಕೆ ಕೊಡುಗೆ‌ ನೀಡುವಂತೆ ವಿದ್ಯಾರ್ಥಿ ದೆಸೆಯಿಂದಲೇ ಯುವಜನರನ್ನು ಅಣಿಗೊಳಿಸುತ್ತದೆ’ ಎಂದು ಹೇಳಿದರು.

ಕರ್ನಾಟಕದ ವಿಶೇಷ, ಶಿಕ್ಷಣ ವ್ಯವಸ್ಥೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಶೆಟ್ಟರ್ ಮತ್ತು ಮುನೇನಕೊಪ್ಪ ಅವರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಸೇಯ್ಲ್ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಶ್ರೀನಿವಾಸ ಜೋಶಿ ಸಂವಾದ ನಡೆಸಿ ಕೊಟ್ಟರು.

ಸ್ವಾಗತ ಸಮಿತಿ ಕಾರ್ಯದರ್ಶಿ ಡಾ. ವಿಜಯ‌ ಮಹಾಂತೇಶ ಪೂಜಾರ, ಎಬಿವಿಪಿ ಹುಬ್ಬಳ್ಳಿ ಘಟಕದ ಅಧ್ಯಕ್ಷ ವಿಠ್ಠಲ ವಾಗ್ಮೋಡೆ ಹಾಗೂ ಕಾರ್ಯದರ್ಶಿ ಸುಶೀಲ್ ಇಟಗಿ, ತೇಜಸ್ ಗೋಕಾಕ್, ರಘು ಅಕಮಂಚಿ, ಸುಭಾಸಸಿಂಗ್ ಜಮಾದಾರ, ಮಣಿಕಂಠ ಕಳಸ, ವೀರೇಶ ಬಾಳಿಕಾಯಿ, ಸಂದೀಪ ಬೂದಿಹಾಳ, ಮಿಥಾಲಿ, ದಿನೇಶ ಶೆಟ್ಟಿ, ಆದಿತ್ಯ ನಂದಕುಮಾರ್, ಡಾ. ಹರಿಕೃಷ್ಣ, ಗೋವಿಂದ ಜೋಶಿ, ಹನುಮಂತ ಶಿಗ್ಗಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.