ನವಲಗುಂದ (ಧಾರವಾಡ): 'ದಂಪತಿ ಒಂದು ಅಥವಾ ಎರಡು ಮಕ್ಕಳು ಮಾಡಿಕೊಳ್ಳಬೇಕು. ಜನಸಂಖ್ಯೆ ನಿಯಂತ್ರಣ ಮಾಡಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಮಾಡೆಲ್ ಹೈಸ್ಕೂಲ್ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. 'ದೇಶದ ಜನಸಂಖ್ಯೆ ಹೆಚ್ಚಾಗಿದೆ 'ಜನಸಂಖ್ಯೆಯಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿದೆ' ಎಂದರು.
'ಅಂತರ್ಜಾತಿ ವಿವಾಹಗಳು ಹೆಚ್ಚಾಗಬೇಕು. ಜಾತಿ, ವರ್ಗ ಪದ್ಧತಿ, ಅಸ್ಪೃಶ್ಯತೆ ಇವೆಲ್ಲವೂ ನಿರ್ಮೂಲನೆಯಾಗಬೇಕು ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಹೊಸ ಬಾಳಿಗೆ ಕಾಲಿಟ್ಟ ವಧು- ವರರು ಆದರ್ಶ ದಂಪತಿಗಳಾಗಬೇಕು ಎಂದು ಹೇಳಿದರು.
'ಸ್ವಂತ ಉದ್ಯೋಗ ಆರಂಭಿಸಬೇಕು. ಉದ್ಯೋಗದಾತರಾಗಬೇಕು. ಉತ್ತಮ ಬದುಕು ಕಟ್ಟಿಕೊಳ್ಳಬೇಕು' ಎಂದರು.
ಕುವೆಂಪು ಹೇಳಿದಂತೆ ನಾಡನ್ನು
ಸರ್ವ ಜನಾಂಗದ ಶಾಂತಿಯ ತೋಟವಾಗಿಸುವುದು ನಮ್ಮ ಆಶಯ. ಸಾಮಾಜಿಕ ನ್ಯಾಯ, ಜಾತ್ಯತೀತ ತತ್ವಗಳು ನಮ್ಮ ಧ್ಯೇಯ ಎಂದರು.
ಕಾರ್ಯಕ್ರಮದಲ್ಲಿ 75 ಜೋಡಿ ದಾಂಪತ್ಯಕ್ಕೆ ಕಾಲಿಟ್ಟರು. ಶಾಸಕ ಎನ್.ಎಚ್.ಕೋನರಡ್ಡಿ ಪುತ್ರ ನವೀನ ಕುಮಾರ್- ಸಹನಾ ಆರತಕ್ಷತೆ ನಡೆಯಿತು.
ಸಚಿವರಾದ ಸಂತೋಷ ಲಾಡ್, ಕೃಷ್ಣ ಬೈರೇಗೌಡ, ಡಾ ಎಚ್.ಸಿ. ಮಹದೇವಪ್ಪ, ಶಾಸಕ ಪ್ರಸಾದ ಅಬ್ಬಯ್ಯ, ಎನ್.ಎಚ್.ಕೋನರಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.