ADVERTISEMENT

ಹುಬ್ಬಳ್ಳಿ | ಸಿದ್ಧಾರೂಢರ ಪುಣ್ಯಾರಾಧನೆ: ಜಲರಥೋತ್ಸವ 10ಕ್ಕೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 4:52 IST
Last Updated 2 ಆಗಸ್ಟ್ 2025, 4:52 IST
ಸಿದ್ಧಾರೂಢ ಸ್ವಾಮೀಜಿ
ಸಿದ್ಧಾರೂಢ ಸ್ವಾಮೀಜಿ   

ಹುಬ್ಬಳ್ಳಿ: ನಗರದ ಸಿದ್ಧಾರೂಢ ಮಠದ ಸಿದ್ಧಾರೂಢ ಸ್ವಾಮೀಜಿಯ 96ನೇ ಪುಣ್ಯಾರಾಧನೆ ಪ್ರಯುಕ್ತ ಆಗಸ್ಟ್‌ 4ರಿಂದ ಆಗಸ್ಟ್‌ 10ರ ತನಕ ವಿವಿಧ ಧಾರ್ಮಿಕ, ಪ್ರವಚನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

ಮಠದ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್‌ ಕಮಿಟಿಯ ಚೇರಮನ್‌ ಚನ್ನವೀರ ಡಿ.ಮುಂಗುರವಾಡಿ ಅವರು, ‘ಆ.4ರಂದು ಸಿದ್ಧಾರೂಢ ಸ್ವಾಮಿಯ ಸಮಾಧಿಗೆ ರುದ್ರಾಭಿಷೇಕ. ಶಿವನಾಮ ಸಪ್ತಾಹದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಪುಣ್ಯಾರಾಧನೆ ಪ್ರಯಕ್ತ ಮಠದ ಕೈಲಾಸ ಮಂಟಪದಲ್ಲಿ ನಿತ್ಯ ಬೆಳಿಗ್ಗೆ 7.45ಕ್ಕೆ ಶಿವಾನಂದ ಜೋಶಿ ಅವರಿಂದ ’ಸಿದ್ಧಾರೂಢ ಭಾರತಿ ಕಲ್ಪದೃಮ‘ ಪುರಾಣ ಪಠಣ ನಡೆಯಲಿದೆ’ ಎಂದರು. 

‘ಆ.4ರಂದು ಸೋಮವಾರ ‘ಪರತರ ಮುಕ್ತಿಗುಪಾಯವಿದು ನಿಜಶಿವಂತ್ರಣ್ಣ’ ವಿಷಯ ಕುರಿತು ಶರಣರಿಂದ ಉಪನ್ಯಾಸ. ಆ.5ರಂದು ‘ಬೇಡ ಬೇಡ ಭೋಗದೊಡನಾಟ’. ಆ.6ರಂದು ‘ದೊರಕಲೇನದರೊಳು ಪರಿಣತೆದಳೆವುದೆ ಚಂದ’, ಆ.7ರಂದು ‘ಮತಿಗೆ ಮಂಗಲವೀವುದಾವುದು?‘. ಆ.8ರಂದು ‘ನಚೇದಿಹಾವೇದಿನ್‌ ಮಹತೀವನಷ್ಟಿ’, ಆ.9ರಂದು ‘ಆತ್ಮವಿಚ್ಛೋಕಂ ತರತಿ’. ಆ.10ರಂದು ‘ಶಿವಾವತಾರಿ ಶ್ರೀ ಸಿದ್ಧಾರೂಢರ ಮಹಿಮೆ’ ವಿಷಯ ಕುರಿತು ಶರಣರು ಉಪನ್ಯಾಸ ನೀಡುವರು. ನಿತ್ಯ ಬೆಳಿಗ್ಗೆ 12ರಿಂದ ಈ ಕಾರ್ಯಕ್ರಮಗಳು ನಡೆಯಲಿದ್ದು, ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸುವರು’ ಎಂದರು.

ADVERTISEMENT

‘ಆ.10ರಂದು ಭಾನುವಾರ ಸಿದ್ಧಾರೂಢ ಸ್ವಾಮಿಯ 96ನೇ ವರ್ಷದ ಪುಣ್ಯತಿಥಿ ಇರುವ ಪ್ರಯುಕ್ತ ಅಂದು ಮಧ್ಯಾಹ್ನ ನಗರದ ಪ್ರಮುಖ ರಸ್ತೆಗಳಲ್ಲಿ ವಾದ್ಯಮೇಳದೊಂದಿಗೆ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ 5.30ಕ್ಕೆ ಸಿದ್ಧಾರೂಢ ಸ್ವಾಮೀಜಿಯ ಜಲರಥೋತ್ಸವ (ತೆಪ್ಪದ ತೇರು) ನಡೆಯಲಿದೆ. ನಂತರ ಮಹಾಪೂಜೆಯೊಂದಿಗೆ ಉತ್ಸವವು ಸಮಾಪ್ತಿಯಾಗಲಿದೆ. ರಾಜ್ಯದ ವಿವಿಧೆಡೆಯಿಂದ 1 ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು. 

‘ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್‌ ಕಮಿಟಿಯ ಮುಖ್ಯ ಆಡಳಿತಾಧಿಕಾರಿ, ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ ಅವರು ಜಲರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ವಿವಿಧ ಮಠಗಳ ಮಠಾಧೀಶರು ಹಾಗೂ ಕಮಿಟಿಯ ಆಡಳಿತ ಮಂಡಳಿಯವರು ಉಪಸ್ಥಿತರಿರುವರು’ ಎಂದರು. 

ಕಮಿಟಿಯ ಧರ್ಮದರ್ಶಿಗಳಾದ ಮಂಜುನಾಥ ಎಸ್‌.ಮುನವಳ್ಳಿ, ಗೋವಿಂದ ಮಣ್ಣೂರ, ಬಾಳು ಟಿ.ಮಗಚಿಕೊಂಡಿ, ಉದಯಕುಮಾರ ಡಿ.ನಾಯ್ಕ, ಕೆ.ಎಲ್‌.ಪಾಟೀಲ, ಅಂದಾನಪ್ಪ ಚಾಲಬ್ಬಿ, ಸರ್ವಮಂಗಳಾ ಎನ್‌.ಪಾಠಕ, ಗೀತಾ ಟಿ.ಕಲಬುರ್ಗಿ, ವಸಂತ ಸಾಲಗಟ್ಟಿ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.