ಹುಬ್ಬಳ್ಳಿ: ಭಕ್ತರ ಆರಾಧ್ಯ ದೈವ ಸಿದ್ಧಾರೂಢ ಸ್ವಾಮೀಜಿ 96ನೇ ಪುಣ್ಯಸ್ಮರಣೆ ಅಂಗವಾಗಿ ಇಲ್ಲಿನ ಸಿದ್ಧಾರೂಢ ಮಠದಲ್ಲಿ ಒಂದು ವಾರದಿಂದ ನಡೆದುಬಂದ ಶಿವನಾಮ ಸಪ್ತಾಹ, ಆರೂಢ ಮಹಿಮೆ ಪ್ರವಚನ ಕಾರ್ಯಕ್ರಮ ಭಾನುವಾರ ಸಂಜೆ ಅದ್ದೂರಿ ಜಲರಥೋತ್ಸವದೊಂದಿಗೆ ಸಂಪನ್ನಗೊಂಡಿತು.
ಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಚನ್ನವೀರ ಮುಂಗರವಾಡಿ, ಭಕ್ತರ ಮೇಲ್ಮನೆ ಸಭಾದ ಅಧ್ಯಕ್ಷ ಡಿ.ಆರ್. ಪಾಟೀಲ ಅವರು ಮಂಗಳಾರತಿ ನೆರವೇರಿಸಿ ಜಲರಥೋತ್ಸವಕ್ಕೆ ಚಾಲನೆ ನೀಡಿದರು.
ಶ್ರಾವಣ ಮಾಸದ ನೂಲು ಹುಣ್ಣಿಮೆ ಮರುದಿನ ನಡೆದ ಸಿದ್ಧಾರೂಢರ ತೆಪ್ಪದ ತೇರು ಉತ್ಸವ ಕಣ್ತುಂಬಿಕೊಳ್ಳಲು ಮಠದ ಆವರಣದಲ್ಲಿರುವ ಪುಷ್ಕರಣಿಯ ಸುತ್ತಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.
‘ಹರ ಹರ ಮಹಾದೇವ’, ‘ಓಂ ನಮಃಶಿವಾಯ’, ‘ಸಿದ್ಧಾರೂಢರ ಅಂಗಾರ ನಾಡಿಗೆಲ್ಲ ಬಂಗಾರ’, ‘ಸಿದ್ಧಾರೂಢರ ಜೋಳಿಗೆ ನಾಡಿಗೆಲ್ಲ ಹೋಳಿಗೆ’ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ಭಕ್ತರು ರಥಕ್ಕೆ ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ಕೆರೆಯ ಅಕ್ಕಪಕ್ಕದಲ್ಲಿದ್ದ ಕಟ್ಟಡ, ವಾಹನಗಳ ಮೇಲೆ ಕೂಡ ನೂರಾರು ಜನರು ನಿಂತು ರಥೋತ್ಸವವನ್ನು ವೀಕ್ಷಿಸಿದರು. ರಾಜ್ಯ ಸೇರಿದಂತೆ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶದ ಭಕ್ತರು ಪಾಲ್ಗೊಂಡಿದ್ದರು.
ಟ್ರಸ್ಟ್ ಪದಾಧಿಕಾರಿಗಳಾದ ರಮೇಶ ಬೆಳಗಾವಿ, ವಿನಾಯಕ ಘೋಡಕೆ, ಮಂಜುನಾಥ ಮುನವಳ್ಳಿ, ಗೋವಿಂದ ಮಣ್ಣೂರ, ಬಾಳು ಮಗಜಿಕೊಂಡಿ, ಉದಯಕುಮಾರ ನಾಯ್ಕ, ಕೆ.ಎಲ್. ಪಾಟೀಲ, ವಿ.ಡಿ. ಕಾಮರಡ್ಡಿ, ಅಂದಾನಪ್ಪ ಚಾಕಲಬ್ಬಿ, ಸರ್ವಮಂಗಳಾ ಪಾಠಕ್, ಗೀತಾ ಕಲಬುರ್ಗಿ, ಶಾಮಾನಂದ ಪೂಜೇರಿ, ಸಿದ್ದನಗೌಡ ಪಾಟೀಲ, ಈರಣ್ಣ ತುಪ್ಪದ ಹಾಜರಿದ್ದರು.
ಪಲ್ಲಕ್ಕಿ ಮೆರವಣಿಗೆ: ಇದಕ್ಕೂ ಮುನ್ನ, ಸಿದ್ಧಾರೂಢ ಮಠದ ಆವರಣದಲ್ಲಿ ಮಧ್ಯಾಹ್ನ 12 ಗಂಟೆಗೆ ಆರತಿ ಬೆಳಗಿ ಪಲ್ಲಕ್ಕಿಯನ್ನು ಬೀಳ್ಕೊಡಲಾಯಿತು.
ವಿವಿಧ ಹೂವಿನ ಮಾಲೆಗಳಿಂದ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಗುರುನಾಥಾರೂಢರು ಮತ್ತು ಸಿದ್ಧಾರೂಢರ ಮೂರ್ತಿಗಳನ್ನು ಕೂರಿಸಲಾಗಿತ್ತು. ಟ್ರ್ಯಾಕ್ಟರ್ ಮೇಲೆ ಪಲ್ಲಕ್ಕಿಯನ್ನು ಇರಿಸಿದ ಬಳಿಕ ಹಳೇ ಹುಬ್ಬಳ್ಳಿಯ ಗಣೇಶಪೇಟೆ, ಚನ್ನಪೇಟೆ ಹೀಗೆ ಸಿದ್ಧಾರೂಢರು ಓಡಾಡಿದ ಸ್ಥಳಗಳಲ್ಲಿ ಸಂಚರಿಸಿ ಸಂಜೆ 5 ಗಂಟೆ ವೇಳೆಗೆ ಮಠಕ್ಕೆ ವಾಪಸಾಯಿತು.
ಬೆಳಿಗ್ಗೆ ಶಿವಾನಂದಭಾರತಿ ಸ್ವಾಮೀಜಿ, ಪುರಷೋತ್ತಮಾನಂದಪುರಿ ಸ್ವಾಮೀಜಿ, ದಯಾನಂದ ಸರಸ್ವತಿ ಸ್ವಾಮೀಜಿ, ಮಲ್ಲಯ್ಯ ಸ್ವಾಮೀಜಿಗಳಿಂದ ‘ಶಿವಾವತಾರಿ ಶ್ರೀ ಸಿದ್ಧಾರೂಢರ ಮಹಿಮೆ’ ಪ್ರವಚನ ನಡೆಯಿತು.
ಮಠದ ಆವರಣದಲ್ಲಿ ಜಾತ್ರೆಯ ಸಂಭ್ರಮ
ಬೆಳಿಗ್ಗೆಯಿಂದಲೇ ಮಠದ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ಗುರುನಾಥಾರೂಢರು ಹಾಗೂ ಸಿದ್ಧಾರೂಢರ ಗದ್ದುಗೆ ದರ್ಶನ ಪಡೆದರು. ಒಂದಷ್ಟು ಜನ ಸ್ವಾಮೀಜಿಗಳ ಪ್ರವಚನ ಆಲಿಸಿದರೆ ಮತ್ತಷ್ಟು ಜನರು ತಾವು ಕುಳಿತಲ್ಲೇ ಭಜನೆ ಸಿದ್ಧಾರೂಢರ ನಾಮಸ್ಮರಣೆ ಮಾಡಿ ಪುನೀತರಾದರು. ಮಠದ ವಿಶಾಲವಾದ ಬಯಲಿನಲ್ಲಿ ಭಕ್ತರ ಹಣೆಗೆ ಬೊಟ್ಟು (ನಾಮ) ಇಡಲಾಯಿತು. ಪೂಜಾ ಸಾಮಗ್ರಿ ಮಂಡಕ್ಕಿ–ಖಾರಾ ಜಿಲೇಬಿ ಮತ್ತಿತರ ಸಿಹಿ ಉತ್ತತ್ತಿ ಆಟಿಕೆ ವಸ್ತುಗಳ ಮಾರಾಟವೂ ಜೋರಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.