ADVERTISEMENT

ಸಂಭ್ರಮದ ಸಿದ್ಧಾರೂಢರ ತೆಪ್ಪದ ತೇರು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 16:15 IST
Last Updated 8 ಮಾರ್ಚ್ 2024, 16:15 IST
ಕಲಘಟಗಿ ತಾಲ್ಲೂಕಿನ ಬೇಗೂರ ಗ್ರಾಮದ ಸಿದ್ಧಾರೂಢರ ತೆಪ್ಪದ ತೇರು ಸಂಭ್ರಮದಿಂದ ಜರುಗಿತು. ಚಿದಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು 
ಕಲಘಟಗಿ ತಾಲ್ಲೂಕಿನ ಬೇಗೂರ ಗ್ರಾಮದ ಸಿದ್ಧಾರೂಢರ ತೆಪ್ಪದ ತೇರು ಸಂಭ್ರಮದಿಂದ ಜರುಗಿತು. ಚಿದಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು    

ಕಲಘಟಗಿ: ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ತಾಲ್ಲೂಕಿನ ಬೇಗೂರ ಗ್ರಾಮದ ನೀರಿನ ಹೊಂಡದಲ್ಲಿ ಸಿದ್ಧಾರೂಢರ ತೆಪ್ಪದ ತೇರು ಭಕ್ತರ ಹರ್ಷೋದ್ಗಾರದೊಂದಿಗೆ ಶುಕ್ರವಾರ ಸಂಭ್ರಮದಿಂದ ಜರುಗಿತು.

ಮಹಾ ಶಿವರಾತ್ರಿ ಅಂಗವಾಗಿ ಗ್ರಾಮದಲ್ಲಿ ಒಂದು ತಿಂಗಳ ಕಾಲ ಗುರು ಚೆನ್ನಯ್ಯ ಹಿರೇಮಠ ಸ್ವಾಮಿಗಳಿಂದ ಸಿದ್ದಾರೂಢರ ಪುರಾಣ ಪ್ರವಚನ, ಏಳು ದಿನಗಳವರೆಗೆ ಬೆಳಿಗ್ಗೆಯಿಂದ ಸಂಜೆವರೆಗೆ ಅಖಂಡ ಶಿವನಾಮಸ್ಮರಣೆ ಮತ್ತು ಮಹಾತ್ಮರಿಂದ ಪ್ರವಚನ ನಡೆದು ಬಂದಿವೆ.

ಶುಕ್ರವಾರ ಬೆಳಿಗ್ಗೆಯಿಂದ ಮಹಿಳೆಯರಿಂದ ಆರತಿ, ಪೂರ್ಣಕುಂಭ ಹಾಗೂ ವಿವಿಧ ವಾದ್ಯ ವೈಭವಗಳೊಂದಿಗೆ ಸಿದ್ಧಾರೂಢರ ಮೂರ್ತಿ ಮೆರವಣಿಗೆ ಗ್ರಾಮದಲ್ಲಿ ನಡೆಯಿತು.

ADVERTISEMENT

ಶಿವರಾತ್ರಿ ಜಾಗರಣೆ ಅಂಗವಾಗಿ ಸಿದ್ಧಾರೂಢರ ಉತ್ಸವ ಮೂರ್ತಿಗೆ ಅಭಿಷೇಕ, ಅರ್ಚನೆ, ಭಜನೆ ಕೀರ್ತನೆಗಳು ನಡೆದು ಶನಿವಾರ ಬೆಳಿಗ್ಗೆ ಬ್ರಾಹ್ಮಿಮಹೂರ್ತದಲ್ಲಿ ಮಹಾಮಂಗಲ ಜರುಗಲಿದೆ.

ಬೆಳಿಗ್ಗೆಯಿಂದ ಭಕ್ತರು ಸಿದ್ದಾರೂಢರ ದೇವಸ್ಥಾನಕ್ಕೆ ಆಗಮಿಸಿ ಹೂಮಾಲೆ, ಬಾಳೆ ಹಣ್ಣು ತಂದು ದೇವರಿಗೆ ಅರ್ಪಿಸಿ ಭಕ್ತಿ ಮೆರೆದರು.

ಸಂಜೆ 6 ಗಂಟೆಗೆ ಗ್ರಾಮದ ಹೊಂಡದ ಕೆರೆಯಲ್ಲಿ ಭಕ್ತರ ಸಮ್ಮುಖದಲ್ಲಿ ಪೂಜೆ ಪುನಸ್ಕಾರದೊಂದಿಗೆ ತೆಪ್ಪದ ತೇರು ಸಾಗಿತು. ತೇರು ನೀರಿನಲ್ಲಿ ಸಾಗುತ್ತಿದಂತೆ ಸೇರಿದ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ‘ಓಂ ನಮ ಶಿವಾಯ, ಸದ್ಗುರು ತಂದೆ ಉದ್ಧಾರದೇವು ನಿನ್ನಿಂದ’ ಎಂಬ ಪತ್ರ ಪಠಣ ಪಟಿಸಿದರು.

ಭಕ್ತರಿಗೆ ನಿರಂತರವಾಗಿ ಅನ್ನ ಪ್ರಸಾದ ಏರ್ಪಡಿಸಲಾಗಿತ್ತು. ಜೋಡಕುರಳಿ ಚಿದಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮಾರ್ಚ್‌ 10 ರಂದು ಪುರಾಣದ ಉತ್ತರ ಪೂಜೆ, ಅಜ್ಜನ ತೊಟ್ಟಿಲು ಉತ್ಸವ, ಕೌದಿ ಪೂಜೆ ಹಾಗೂ ಮಹಾಮಂಗಳದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.