ADVERTISEMENT

ಮೈಸೂರಿನ ಭುವನೇಶ್ವರಿ ದೇವಿಗೆ ಧಾರವಾಡದ ಬೆಳ್ಳಿ ಕವಚ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 15:50 IST
Last Updated 14 ಅಕ್ಟೋಬರ್ 2020, 15:50 IST
ಕನ್ನಡಾಂಬೆ ಮೂರ್ತಿಯ ಬೆಳ್ಳಿ ಮುಖವಾಡಕ್ಕೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದ ನವೀನ ಕಡ್ಲಾಸ್ಕರ್
ಕನ್ನಡಾಂಬೆ ಮೂರ್ತಿಯ ಬೆಳ್ಳಿ ಮುಖವಾಡಕ್ಕೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದ ನವೀನ ಕಡ್ಲಾಸ್ಕರ್   

ಧಾರವಾಡ: ಮೈಸೂರು ಅರಮನೆ ಆವರಣದಲ್ಲಿರುವ ಭುವನೇಶ್ವರಿ ಮೂರ್ತಿಗೆ ಇಲ್ಲಿನ ಕಲಾವಿದ ನವೀನ ಕಡ್ಲಾಸ್ಕರ್ ಅವರು ಸಿದ್ಧಪಡಿಸಿದ ಬೆಳ್ಳಿ ಕವಚ ತೊಡಿಸಲಾಗುತ್ತಿದ್ದು, ನಾಡಹಬ್ಬದ ಸಂದರ್ಭದಲ್ಲಿ ಎರಡೂ ಸಾಂಸ್ಕೃತಿಕ ನಗರಿಯಲ್ಲಿ ಸಂಭ್ರಮ ಮನೆ ಮಾಡಿದೆ.

ಸುಮಾರು 70 ವರ್ಷಗಳ ಹಿಂದೆ ಭುವನೇಶ್ವರಿ ಅಮ್ಮನವರ ದೇವಸ್ಥಾನ ಅರಮನೆ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದೆ. ಆರ್ಟ್‌ ಆಫ್ ಲಿವಿಂಗ್‌ ಸಂಸ್ಥೆಯ ಭಕ್ತರ ಸಮೂಹ ಸೇರಿ ಈ ದೇವಿಗೆ ಬೆಳ್ಳಿ ಕವಚ ಮಾಡಿಸಲು ಸಂಕಲ್ಪ ಮಾಡಿದ್ದರು. ಇದಕ್ಕೆ ಸೂಕ್ತ ಕಲಾವಿದರ ಹುಡುಕಾಟದಲ್ಲಿದ್ದ ತಂಡಕ್ಕೆ ಕಲಾವಿದ ನವೀನ ಕಡ್ಲಾಸ್ಕರ್ನೆರವಾದರು.

ಸದ್ಯ ಶಿಲ್ಪ ಕಲಾ ಅಕಾಡೆಮಿ ಸದಸ್ಯರಾಗಿರುವ ನವೀನ ಅವರು, ಹುಬ್ಬಳ್ಳಿಯ ನಾಗಶೆಟ್ಟಿ ಕೊಪ್ಪದ ಹನುಮಂತ ದೇವರಿಗೆ 130ಕೆ.ಜಿ. ಬೆಳ್ಳಿ ರಥ, ಲಿಂಗಸೂರು ಬಳಿಯ ಗುಡಿಗೆ 40 ಕೆ.ಜಿ. ರಥ ಸಿದ್ಧಪಡಿಸಿದ ಅನುಭವ ಹೊಂದಿದವರು. ಇವರ ನೆರವು ಪಡೆದ ಭಕ್ತರ ತಂಡ ಅವರಿಗೆ 12 ಕೆ.ಜಿ. ಬೆಳ್ಳಿ ನೀಡಿ ಕವಚದ ಕೆಲಸವನ್ನು ನೀಡಿತು.

ADVERTISEMENT

‘ಫೆಬ್ರುವರಿಯಲ್ಲಿ ನಿರ್ಮಾಣದ ಹೊಣೆಯನ್ನು ನೀಡಿದ ತಂಡ, ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಜನ್ಮದಿನದ ಹೊತ್ತಿಗೆ ದೇವಿಗೆ ಬೆಳ್ಳಿ ಕವಚ ತೊಡಿಸಲು ಸಂಕಲ್ಪ ಮಾಡಿದ್ದರು. ಹೀಗಾಗಿ ಮೇ 13ಕ್ಕೆ ನೀಡುವಂತೆ ತಿಳಿಸಿದ್ದರು. ಆದರೆ ಕೋವಿಡ್ ಸೋಂಕು ವ್ಯಾಪಿಸದಂತೆ ಜಾರಿಯಲ್ಲಿದ್ದ ಲಾಕ್‌ಡೌನ್‌ನಿಂದಾಗಿ ಆಗ ಸಾಧ್ಯವಾಗಲಿಲ್ಲ. ಹೀಗಾಗಿ ದಸರಾ ಸಂದರ್ಭದಲ್ಲಿ ಕವಚವನ್ನು ತೊಡಿಸಲಾಗುತ್ತಿದೆ. ಕವಚ ತೊಡಿಸುವ ಕೆಲಸವನ್ನು ಸದ್ಯ ದೇವಾಲಯದಲ್ಲಿ ನಡೆಸಲಾಗುತ್ತಿದೆ’ ಎಂದು ನವೀನ ತಿಳಿಸಿದರು.

‘ಅತ್ಯಂತ ಕುಸುರಿ ಕೆಲಸ ಇದಾಗಿದ್ದು ಕವಚ ಉತ್ತಮವಾಗಿ ಮೂಡಿಬಂದ ಆತ್ಮತೃಪ್ತಿ ಇದೆ. ಹಣೆಗೆ ಕೆಂಪು ಹರಳು ಹಾಗೂ ಕಿರೀಟಕ್ಕೆ ಹಸಿರು ಹರಳನ್ನು ಇಡಲಾಗಿದೆ. ಈ ಕೆಲಸದಲ್ಲಿ ಕಲಾವಿದರಾದ ಸಚಿನ್ ಕಡ್ಲಾಸ್ಕರ್, ನಿಖಿಲ್ ಸೂಳಿಭಾವಿ, ಗಣೇಶ ಸಾವಗಾಂವ್ ಹಾಗೂ ಭಾರತಿ ಕಡ್ಲಾಸ್ಕರ್ ಅವರ ಶ್ರಮವೂ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.