ADVERTISEMENT

ಡಿಕೆಶಿ, ಬಿಎಸ್‌ವೈ ವಿರುದ್ಧ ಸುಪ್ರೀಂಗೆ ವಿಶೇಷ ಮೇಲ್ಮನವಿ ಅರ್ಜಿ

ಬೆನ್ನಿಗಾನಹಳ್ಳಿಯಲ್ಲಿ ಸರ್ಕಾರಿ ಭೂಮಿ ಡಿನೋಟಿಫಿಕೇಶನ್: ಎಸ್‌.ಆರ್. ಹಿರೇಮಠ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 18:30 IST
Last Updated 16 ಅಕ್ಟೋಬರ್ 2019, 18:30 IST

ಹುಬ್ಬಳ್ಳಿ: ‘ಬೆಂಗಳೂರಿನ ಬೆನ್ನಿಗಾನಹಳ್ಳಿಯಲ್ಲಿ 4 ಎಕರೆ 20 ಗುಂಟೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ (ಎಸ್‌ಎಲ್‌ಪಿ) ಸಲ್ಲಿಸಲಾಗಿದೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್‌.ಆರ್. ಹಿರೇಮಠ ಹೇಳಿದರು.

‘2003ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅಕ್ರಮವಾಗಿ ಈ ಭೂಮಿ ಖರೀದಿಸಿದ್ದರು. 2010ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಈ ಜಾಗವನ್ನು ಕಾನೂನುಬಾಹಿರವಾಗಿ ಡಿನೋಟಿಫಿಕೇಶನ್ ಮಾಡಿದ್ದರು. ಹಾಗಾಗಿ, ಇಬ್ಬರ ವಿರುದ್ಧವೂ 480 ಪುಟಗಳ ಎಸ್‌ಎಲ್‌ಪಿಯನ್ನು ಆ. 8ರಂದು ಸಲ್ಲಿಸಲಾಗಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ಅವ್ಯವಹಾರದ ವಿರುದ್ಧ ಮೊದಲಿಗೆ ಟಿ.ಜೆ. ಅಬ್ರಾಹಂ ಹಾಗೂ ಕಬ್ಬಾಲೆಗೌಡ ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಬಳಿಕ, ಹಿಂಪಡೆದರು. ಸಮಾಜ ಪರಿವರ್ತನಾ ಸಮುದಾಯವು ಏಕಾಂಗಿಯಾಗಿ ಹೋರಾಟ ಮುಂದುವರಿಸಿದೆ’ ಎಂದರು.

ADVERTISEMENT

ಡಿ.ಕೆ. ಸುರೇಶ ವಿರುದ್ಧವೂ ತನಿಖೆಯಾಗಲಿ:

‘ಡಿ.ಕೆ. ಶಿವಕುಮಾರ್ ಅವರ ಸೋದರ ಹಾಗೂ ಸಂಸದ ಡಿ.ಕೆ. ಸುರೇಶ್ ಕೂಡ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ, ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಗೆ ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.

‘ಸಚಿವ ವಿ. ಸೋಮಣ್ಣ ಕೂಡ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಜಾಗೃತ ಆಯೋಗಕ್ಕೆ (ಸಿವಿಸಿ) ದಾಖಲೆ ಸಮೇತ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

ದಾಳಿ ಸ್ವಾಗತಾರ್ಹ:

‘ತುಮಕೂರನ್ನು ರಿಪಬ್ಲಿಕ್‌ ಮಾಡಿಕೊಂಡಿರುವ ಶಾಸಕ ಜಿ. ಪರಮೇಶ್ವರ್ ಅವರ ಮೇಲೆ ನಡೆದಿರುವ ಐ.ಟಿ ದಾಳಿ ಸ್ವಾಗತಾರ್ಹ. ಅದೇ ರೀತಿ ಉತ್ತರಕನ್ನಡವನ್ನು ರಿಪಬ್ಲಿಕ್ ಮಾಡಿಕೊಂಡಿರುವ ಶಾಸಕ ಆರ್‌.ವಿ. ದೇಶಪಾಂಡೆ ಸೇರಿದಂತೆ, ಹಲವು ರಾಜಕಾರಣಿಗಳ ಮೇಲೂ ಐ.ಟಿ ದಾಳಿಯಾಗಬೇಕು. ಆ ಮೂಲಕ, ಭಾರಿ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಕಾನೂನಿಗೆ ವ್ಯಾಪ್ತಿಗೆ ತಂದು ಶಿಕ್ಷಿಸಬೇಕು’ ಎಂದು ಆಗ್ರಹಿಸಿದರು.

‘ಗಣಿಗಾರಿಕೆ ಪ್ರದೇಶದಲ್ಲಿ ಜೈವಿಕ ಪರಿಸರ ಪುನರ್‌ ನಿರ್ಮಾಣಕ್ಕಾಗಿ ಸಮಗ್ರ ಪರಿಸರ ಯೋಜನೆಯ ₹24,996 ಕೋಟಿಯನ್ನು ಗಣಿಗಾರಿಕೆಯಿಂದ ತತ್ತರಿಸಿರುವ ಪ್ರದೇಶದ ಪುನಶ್ಚೇತನ ಹಾಗೂ ಅಲ್ಲಿನ ಜನರ ಹಿತಕ್ಕಾಗಿ ಬಳಸಬೇಕು. ಅದಕ್ಕಾಗಿ, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಮೇಲ್ವಿಚಾರಣೆ ಪ್ರಾಧಿಕಾರವನ್ನು ರಚಿಸಬೇಕು ಎಂದು ಪರಿವರ್ತನಾ ಸಮುದಾಯವು ಮುಂದಿನ ವಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ’ ಎಂದರು.

ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಹುನ್ನಾರ

‘ಗದಗ ಜಿಲ್ಲೆಯ ಕಪ್ಪತಗುಡ್ಡವನ್ನು ವನ್ಯಜೀವಿ ಧಾಮ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗಾಗಲೇ ಘೋಘಿಸಿದ್ದಾರೆ. ಆದರೂ, ಬಲ್ಡೊಟಾ ಕಂಪನಿಯು ಈ ಜಾಗದಲ್ಲಿ ಗಣಿಗಾರಿಕೆ ಮಾಡಲು ಹುನ್ನಾರ ನಡೆಸುತ್ತಿದೆ.ವನ್ಯಜೀವಿ ಧಾಮ ಘೋಷಣೆಯನ್ನು ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತಿದೆ’ ಎಂದು ಎಸ್‌.ಆರ್‌. ಹಿರೇಮಠ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.