ಹುಬ್ಬಳ್ಳಿ: ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪ್ರತಿನಿಧಿಸಿ, ಪದಕ ಗೆದ್ದ ಕ್ರೀಡಾಪಟುಗಳಿಗೆ ವಿಶ್ವವಿದ್ಯಾಲಯವು ಎರಡು ವರ್ಷದಿಂದ ನಗದು ಬಹುಮಾನ ನೀಡಿಲ್ಲ.
ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿದರೆ ₹15 ಸಾವಿರ, ದ್ವಿತೀಯ ಸ್ಥಾನಕ್ಕೆ ₹10 ಸಾವಿರ ಮತ್ತು ತೃತೀಯ ಸ್ಥಾನಕ್ಕೆ ₹7 ಸಾವಿರ, ತಂಡ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರೆ ₹35 ಸಾವಿರ ನಗದು ಬಹುಮಾನವಿದೆ.
‘ಕಳೆದ ಎರಡು ವರ್ಷಗಳಲ್ಲಿ 15ಕ್ಕೂ ಹೆಚ್ಚು ಕ್ರೀಡಾಪಟುಗಳು ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದಿದ್ದಾರೆ. ವಿದ್ಯಾರ್ಥಿಗಳ ಪ್ರವೇಶ ಶುಲ್ಕದಲ್ಲಿ ಕ್ರೀಡಾ ಶುಲ್ಕ, ಕ್ರೀಡಾ ಅಭಿವೃದ್ಧಿ ಶುಲ್ಕದ ರೂಪದಲ್ಲಿ ₹330 ಪಡೆಯಲಾಗುತ್ತದೆ. ಆದರೆ, ನಮಗೆ ನಗದು ಬಹುಮಾನ ಕೊಡುತ್ತಿಲ್ಲ’ ಎಂದು ಕ್ರೀಡಾಪಟುಗಳು ತಿಳಿಸಿದರು.
‘ಸ್ಟೀಪಲ್‌ಚೇಸ್‌ನಲ್ಲಿ ಸತತ ಎರಡು ವರ್ಷ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗಳಿಸಿದರೂ ನನಗೆ ನಗದು ಬಹುಮಾನ ಸಿಕ್ಕಿಲ್ಲ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸಲು ಸಾಕಷ್ಟು ವೆಚ್ಚ ಆಗುತ್ತದೆ. ಕುಟುಂಬದ ಆರ್ಥಿಕ ಸ್ಥಿತಿ ಸರಿ ಇಲ್ಲ. ವಿಶ್ವವಿದ್ಯಾಲಯವು ನಗದು ಬಹುಮಾನ ನೀಡಿದರೆ ಅನುಕೂಲವಾಗುತ್ತದೆ’ ಎಂದು ಪದವಿ ಅಂತಿಮ ವರ್ಷದ ಕ್ರೀಡಾಪಟುವೊಬ್ಬರು ತಿಳಿಸಿದರು.
‘ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಆಂತರಿಕ ಅಂಕ, ಹಾಜರಾತಿ ಸರಿಯಾಗಿ ನೀಡುವುದಿಲ್ಲ. ಕೇಳಿದರೆ ಉಡಾಫೆಯಾಗಿ ಉತ್ತರಿಸುತ್ತಾರೆ. ವಿದ್ಯಾರ್ಥಿಗಳು ಪದಕ ಗಳಿಸಿದರೆ ವಿಶ್ವವಿದ್ಯಾಲಯಕ್ಕೆ ಹೆಸರು ಬರುತ್ತದೆ. ಆದರೂ ವಿಶ್ವವಿದ್ಯಾಲಯದವರು ಈ ರೀತಿ ನಡೆದುಕೊಳ್ಳುತ್ತಾರೆ’ ಎಂದು ಕ್ರೀಡಾಪಟುವಿನ ತಾಯಿ ಹೇಳಿದರು.
‘ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳನ್ನು ತಯಾರು ಮಾಡಲು ಕೇಂದ್ರ ಸರ್ಕಾರ ಖೇಲೊ ಇಂಡಿಯಾ ಸೇರಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ವಿಶ್ವವಿದ್ಯಾಲಯಗಳು ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸದಿದ್ದರೆ, ಉದ್ದೇಶ ಈಡೇರದು. ಕ್ರೀಡಾಪಟುಗಳಿಗೆ ಗುಣಮಟ್ಟದ ಶೂ, ಪೌಷ್ಟಿಕ ಆಹಾರ ಬೇಕು. ನಗದು ಬಹುಮಾನ ಸಿಕ್ಕರೆ ಸಹಕಾರಿ ಆಗುತ್ತದೆ’ ಎಂದು ಧಾರವಾಡ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ವಿಲಾಸ ನೀಲಗುಂದ ಹೇಳಿದರು.
‘ಕರ್ನಾಟಕ ವಿಶ್ವವಿದ್ಯಾಲಯದಡಿ ಧಾರವಾಡ, ಗದಗ, ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ಕಾಲೇಜುಗಳಿವೆ. ಪ್ರತಿ ವರ್ಷ ₹4.50 ಕೋಟಿಗೂ ಹೆಚ್ಚು ಕ್ರೀಡೆ, ಕ್ರೀಡಾ ಅಭಿವೃದ್ಧಿ ಶುಲ್ಕ ಸಂಗ್ರಹವಾಗುತ್ತದೆ. ಆದರೆ, ಕ್ರೀಡೆಗಾಗಿ ಒಂದು ಕೋಟಿ ರೂಪಾಯಿಯೂ ಖರ್ಚು ಮಾಡುವುದಿಲ್ಲ’ ಎಂದು ಕಾಲೇಜುವೊಂದರ ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.