ಧಾರವಾಡ: ಜೂನ್ 14 ರಿಂದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ-2 ಆರಂಭವಾಗಲಿದೆ. ಜಿಲ್ಲೆಯ 25 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 7469 ಪರೀಕ್ಷಾರ್ಥಿಗಳಿದ್ಧಾರೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ-2 ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಶಿಸ್ತುಬದ್ಧವಾಗಿ ಪರೀಕ್ಷೆ ನಡೆಸಬೇಕು. ಗೊಂದಲ, ನಕಲು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಕಾಲಕ್ಕೆ ಪ್ರಶ್ನೆ ಪತ್ರಿಕೆಗಳು ಪರೀಕ್ಷಾ ಕೇಂದ್ರಕ್ಕೆ ತಲುಪುವಂತೆ ಜಾಗ್ರತೆ ವಹಿಸಬೇಕು ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ಸೌಕರ್ಯಗಳನ್ನು ಕಲ್ಪಿಸಬೇಕು. ಸಿ.ಸಿ.ಟಿವಿ ಕ್ಯಾಮೆರಾ ಕಣ್ಗಾವಲು, ಕುಡಿಯುವ ನೀರು, ಶೌಚಾಲಯ ಸೌಕರ್ಯಗಳನ್ನು ಕಲ್ಪಿಸಬೇಕು. ಶಾಲಾ ಮುಖ್ಯಶಿಕ್ಷಕರು, ಪರೀಕ್ಷಾ ಕೇಂದ್ರಗಳ ನೊಡೆಲ್ ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ-1 ರಲ್ಲಿ ಜಿಲ್ಲೆಯ ಕೆಲವು ಶಾಲೆಗಳು ಶೇ 100 ಫಲಿತಾಂಶ ದಾಖಲಿಸಿವೆ. 2024–25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಧಾರವಾಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಅಧಿಕಾರಿಗಳು, ವಿಷಯ ಪರಿವೀಕ್ಷಕರು, ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು ಈಗಿನಿಂದಲೇ ಕಾರ್ಯೋನ್ಮುಖರಾಗಬೇಕು. ಪ್ರತಿ 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದರು.
ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ನೊಡೆಲ್ ಅಧಿಕಾರಿ ರವಿಕುಮಾರ ಆರ್. ಬಾರಾಟಕ್ಕೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.