ADVERTISEMENT

ಎಸ್ಸೆಸ್ಸೆಲ್ಸಿ: ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ

ಧಾರವಾಡ ಜಿಲ್ಲೆಯಲ್ಲಿ 27,841 ಮಕ್ಕಳಿಗೆ ಪರೀಕ್ಷೆ

ಬಸವರಾಜ ಹವಾಲ್ದಾರ
Published 3 ಜೂನ್ 2020, 16:23 IST
Last Updated 3 ಜೂನ್ 2020, 16:23 IST

ಹುಬ್ಬಳ್ಳಿ: ಕೊರೊನಾ ಭೀತಿಯ ನಡುವೆಯೇ ಧಾರವಾಡ ಜಿಲ್ಲೆಯ 90 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ಆರಂಭಿಸಿದೆ.

ಜಿಲ್ಲೆಯಲ್ಲಿ ಈ ಬಾರಿ 27,841 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 14,611 ವಿದ್ಯಾರ್ಥಿಗಳು, 13,230 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ.

ಕೊರೊನಾದಿಂದಾಗಿ ವಿದ್ಯಾರ್ಥಿಗಳು ತಮಗೆ ಅನುಕೂಲ ಇರುವ ಜಿಲ್ಲೆಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಹಾಗಾಗಿ, ಜಿಲ್ಲೆಯ 364 ವಿದ್ಯಾರ್ಥಿಗಳು ತಾವಿರುವ ಜಿಲ್ಲೆಯಲ್ಲಿ, 426 ಮಕ್ಕಳು ಧಾರವಾಡ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಅನುಮತಿ ಕೇಳಿದ್ದಾರೆ. ಅದಕ್ಕೆ ವ್ಯವಸ್ಥೆ ಮಾಡಿದ್ದಾರೆ.

ADVERTISEMENT

ಪ್ರತಿ ಕೊಠಡಿಗೆ 24 ವಿದ್ಯಾರ್ಥಿಗಳಂತೆ 90 ಕೇಂದ್ರಗಳನ್ನು ಗುರುತಿಸಲಾಗಿತ್ತು. ಈಗ ಕೊರೊನಾದಿಂದಾಗಿ ಪ್ರತಿ ಕೊಠಡಿಯಲ್ಲಿ 18 ರಿಂದ 20 ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿರುವುದರಿಂದ ಈಗಿರುವ ಕೇಂದ್ರದ ಪಕ್ಕದಲ್ಲಿರುವ ಶಾಲಾ–ಕಾಲೇಜುಗಳಲ್ಲಿ ಹೆಚ್ಚುವರಿಯಾಗಿ 23 ಉಪಕೇಂದ್ರಗಳನ್ನು ಗುರುತಿಸಲಾಗಿದೆ.

ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ಕೊರೊನಾದ ಲಕ್ಷಣಗಳನ್ನು ಹೊಂದಿದವರಿದ್ದರೆ, ಅವರಿಗಾಗಿಯೇ ಪ್ರತ್ಯೇಕವಾಗಿ ಎರಡು ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ ಎರಡು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಕೊನೆ ಗಳಿಗೆಯಲ್ಲಿ ಯಾವುದೇ ಪರೀಕ್ಷಾ ಕೇಂದ್ರ ಕಂಟೈನ್ಮೆಂಟ್‌ ವಲಯದ ವ್ಯಾಪ್ತಿಯಲ್ಲಿ ಬಂದರೆ ಆ ಕೇಂದ್ರವನ್ನು ಹೆಚ್ಚುವರಿ ಕೇಂದ್ರಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರತಿ ಕೇಂದ್ರಕ್ಕೂ ನಾಲ್ವರು ಸಿಬ್ಬಂದಿ ಒಳಗೊಂಡ ಹೆಲ್ತ್‌ ಡೆಸ್ಕ್‌ ಸ್ಥಾಪಿಸಲಾಗಿದೆ. ಅವರು, ಕೇಂದ್ರದ ಸ್ಯಾನಿಟೈಜಿಂಗ್‌, ವಿದ್ಯಾರ್ಥಿಗಳ ಥರ್ಮಲ್‌ ಸ್ಕ್ರಿನಿಂಗ್‌, ಮಾಸ್ಕ್‌ ವಿತರಣೆಯನ್ನು ನೋಡಿಕೊಳ್ಳಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ಉಪ ನಿರ್ದೇಶಕ ಮೋಹನಕುಮಾರ ಹಂಚಾಟೆ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಕೌಟ್ಸ್ ಆ್ಯಂಡ್‌ ಗೈಡ್ಸ್‌ ಜತೆಗೆ ಟಾಟಾ ಮೋಟರ್ಸ್‌ ಸೇರಿದಂತೆ ವಿವಿಧ ಸಂಸ್ಥೆಗಳವರು ಮಾಸ್ಕ್‌ ನೀಡಿದ್ದಾರೆ. ಅವುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗಾಗಿ ಬಾಕ್ಸ್‌ ಗುರುತು ಹಾಕಲಾಗಿರುತ್ತದೆ. ಅಲ್ಲಿ ಸಾಲಾಗಿ ನಿಂತು ಥರ್ಮಲ್‌ ಸ್ಕ್ರಿನಿಂಗ್‌ಗೆ ಒಳಗಾಗಬೇಕು ಎಂದು ಅವರು ತಿಳಿಸಿದರು.

‘ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲಿ ನೂಕುನುಗ್ಗಲು ಆಗಬಾರದೆಂದು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಕುಡಿಯುವ ನೀರಿನ ಬಾಟಲಿಗಳ ವಿತರಣೆಗೆ ಚಿಂತನೆ ನಡೆಸಲಾಗಿದೆ’ ಎಂದರು.

‘ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಬರಲು ಶಾಲಾ ವಾಹನಗಳನ್ನು ಬಳಸಿಕೊಳ್ಳಲಾಗುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ಪರೀಕ್ಷಾ ದಿನಗಳಲ್ಲಿ ಹೆಚ್ಚುವರಿ ಎನ್‌ಡಬ್ಲ್ಯುಆರ್‌ಟಿಸಿ ಬಸ್‌ ಓಡಾಡಕ್ಕೂ ಮಾರ್ಗ ಪಟ್ಟಿ ನೀಡಲಾಗುತ್ತದೆ’ ಎಂದು ಅವರು ಹೇಳಿದರು.

‘ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಯ ವಸತಿ ನಿಲಯಗಳಲ್ಲಿಯೂ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ. ಅದರ ಪ್ರಯೋಜನವನ್ನು ಅವರು ಪಡೆದುಕೊಳ್ಳಬಹುದಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.