ADVERTISEMENT

ಗಣೇಶೋತ್ಸವದಲ್ಲಿ ಚೂರಿ ಇರಿತ: ಒಬ್ಬನ ಬಂಧನ

ಡಾನ್ಸ್ ಮಾಡುವಾಗ ಕೈ ತಾಕಿದ್ದಕ್ಕೆ ಕೃತ್ಯ; ತಲೆ ಮರೆಸಿಕೊಂಡ ಇಬ್ಬರಿಗೆ ಶೋಧ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 16:18 IST
Last Updated 6 ಅಕ್ಟೋಬರ್ 2019, 16:18 IST

ಹುಬ್ಬಳ್ಳಿ: ಗಣೇಶೋತ್ಸವ ಮೆರವಣಿಗೆಯಲ್ಲಿ ಡಾನ್ಸ್ ವಿಚಾರಕ್ಕೆ ಸಂಬಂಧಿಸಿದಂತೆ, ಗಣೇಶಪೇಟೆ ಸರ್ಕಲ್‌ನಲ್ಲಿ ಯುವಕನೊಬ್ಬನಿಗೆ ಚೂರಿಯಿಂದ ಇರಿದಿದ್ದ ಮಹಮ್ಮದ್ ಆಸಿಫ (20) ಎಂಬಾತನನ್ನು ಶಹರ ಠಾಣೆ ಪೊಲೀಸರು ಭಾನುವಾರ ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಪ್ರಮುಖ ಆರೋಪಿ ಸೇರಿದಂತೆ, ತಲೆ ಮೆರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವೀರಾಪುರ ಓಣಿಯ ಉದ್ದಿ ನಾಗಪ್ಪನ ಚಾಳ ನಿವಾಸಿಯಾದ ಆಸಿಫ ಹಾಗೂ ಇನ್ನಿಬ್ಬರು, ಗಣೇಶೋತ್ಸವ ಮೆರವಣಿಗೆಯ ಹನ್ನೊಂದನೇ ದಿನವಾದ ಸೆ. 13ರಂದು ಮಹಾಂತೇಶ ಹೊಸಮನಿ ಎಂಬುವರಿಗೆ ಚೂರಿಯಿಂದ ಇರಿದಿದ್ದರು.

‘ಚೂರಿ ಇರಿತಕ್ಕೊಳಗಾಗಿದ್ದ ಹೊಸಮನಿ ಜತೆ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಹಣಕಾಸಿನ ವ್ಯವಹಾರ ಹೊಂದಿದ್ದ. ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆತನೊಂದಿಗೆ ಜಗಳ ತೆಗೆದಿದ್ದ. ಬಳಿಕ, ಸಹಚರರೊಂದಿಗೆ ಹಲ್ಲೆ ನಡೆಸಿ, ಚೂರಿಯಿಂದ ಎದೆ ಮತ್ತು ಹಣೆಗೆ ಇರಿದು ಪರಾರಿಯಾಗಿದ್ದ’ ಎಂದು ಶಹರ ಠಾಣೆ ಇನ್‌ಸ್ಪೆಕ್ಟರ್ ಡಾ. ಗಿರೀಶ ಎಚ್. ಭೋಜಣ್ಣವರ ತಿಳಿಸಿದರು.

ADVERTISEMENT

‘ಘಟನಾ ಸ್ಥಳದಲ್ಲಿನ ಸಿ.ಸಿ ಟಿ.ವಿ ಕ್ಯಾಮೆರಾ ಮತ್ತು ಆರೋಪಿಗಳ ಕರೆ ವಿವರಗಳನ್ನು ಕಲೆ ಹಾಕಿ ಆರೋಪಿಯನ್ನು ಬಂಧಿಸಲಾಯಿತು. ತಲೆ ಮರೆಸಿಕೊಂಡಿರುವ ಇಬ್ಬರೂ ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ’ ಎಂದು ಹೇಳಿದರು.

ಗಾಂಜಾ ಮಾರಾಟ: ಮೂವರ ಬಂಧನ
ನಗರದ ಹಳೇ ಗಬ್ಬೂರಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆಜಾದ ಕಾಲೋನಿಯ ಮನೋಜ (45), ಎಸ್‌.ಎಂ.ಕೃಷ್ಣಾನಗರದ ತಬ್ರೇಜ ಹಾಗೂ ಹಳೇ ಹುಬ್ಬಳ್ಳಿಯ ಮುದತ್ಸರ ಎಂಬುವರನ್ನು ಕಸಬಾಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 130 ಗ್ರಾಂ ಗಾಂಜಾ, ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಿದ ಇನ್‌ಸ್ಪೆಕ್ಟರ್ ಎಸ್.ಆರ್. ಭರತ್ ನೇತೃತ್ವದ ತಂಡಕ್ಕೆ ಪೊಲೀಸ್ ಕಮಿಷನರ್ ಆರ್. ದಿಲೀಪ್ ಬಹುಮಾನ ಘೋಷಿಸಿದ್ದಾರೆ.

ರೌಡಿಗಳ ಮನೆ ಮೇಲೆ ದಾಳಿ
ಅಪ‍ರಾಧ ಚಟುವಟಿಕೆಯಲ್ಲಿ ನಿರತರಾಗಿರುವವರ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಅವಳಿನಗರ ಪೊಲೀಸರು, ಭಾನುವಾರ ಹುಬ್ಬಳ್ಳಿಯಲ್ಲಿ 21 ಹಾಗೂ ಧಾರವಾಡದಲ್ಲಿ ನಾಲ್ವರು ಸೇರಿದಂತೆ, ಒಟ್ಟು 25 ರೌಡಿ ಶೀಟರ್‌ಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳವು
ಪ್ರಯಾಣಿಕರ ಸೋಗಿನಲ್ಲಿ ಬಸ್‌ ಏರಿದ ಕಳ್ಳರು, ಕೇಶ್ವಾಪುರದ ಪ್ರಹ್ಲಾದ ವೆಂಕಟೇಶ ಕಂಚಿ ಎಂಬುವರಿಂದ ₹95 ಸಾವಿರ ಮೌಲ್ಯದ ಮೂರು ಉಂಗುರ ಹಾಗೂ ₹20 ಸಾವಿರ ನಗದು ಕಳವು ಮಾಡಿದ್ದಾರೆ.

ಕಂಚಿ ಅವರು ಅ. 3ರಂದು ಬೆಳಿಗ್ಗೆ 4.30ರ ಸುಮಾರಿಗೆ ಬೆಂಗಳೂರಿನಿಂದ ಐರಾವತ ಬಸ್‌ನಲ್ಲಿ ಹುಬ್ಬಳ್ಳಿಗೆ ಬರುತ್ತಿದ್ದರು. ಆಗ ಇವರ ಪಕ್ಕ ಬಂದು ಕುಳಿತ ಇಬ್ಬರು ಅಪರಿಚಿತರು, ನಿದ್ರಾವಸ್ಥೆಯಲ್ಲಿದ್ದ ಕಂಚಿ ಅವರಿಗೆ ಗೊತ್ತಾಗದ ಹಾಗೆ ಕೃತ್ಯ ಎಸಗಿದ್ದಾರೆ ಎಂದು ಉಪನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ: ಬಂಧನ
ವಾಹನಗಳ ತಪಾಸಣೆ ಮಾಡುತ್ತಿದ್ದ ಪೊಲೀಸ್ ಕಾನ್‌ಸ್ಟೆಬಲ್ ಮಹೇಶ ಶಿವಪ್ಪ ಕುಂಬಾರ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ, ವಿದ್ಯಾನಗರ ಠಾಣೆ ಪೊಲೀಸರು ನೇಕಾರನಗರದ ಜಾಹೀದ ಅಹ್ಮದ ಜವಳಿ ಎಂಬಾತನನ್ನು ಬಂಧಿಸಿ, ಜೈಲಿಗೆ ಕಳಿಸಲಾಗಿದೆ.

ಕುಂಬಾರ ಅವರು ಬೆಳಿಗ್ಗೆ 11ರ ಸುಮಾರಿಗೆ ಸಿದ್ದೇಶ್ವರ ಪಾರ್ಕ್ ಬಳಿ, ನಾಕಾ ಬಂದಿ ಹಾಕಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆಗ ಬೈಕ್‌ನಲ್ಲಿ ಬಂದ ಜಾಹೀದನಿಗೆ ವಾಹನ ದಾಖಲೆ ತೋರಿಸುವಂತೆ ಸೂಚಿಸಿದ್ದಾರೆ. ಅದಕ್ಕೆ ನಿರಾಕರಿಸಿದ ಆತ, ಕುಂಬಾರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಅಕ್ರಮ ಮದ್ಯ ಮಾರಾಟ
ಆನಂದನಗರ ಬಸ್ ನಿಲ್ದಾಣದ ಬಳಿಯ ಮನೆಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆನಂದನಗರದ ವಿನಾಯಕ ಪಾಂಡುರಂಗಸಾ ಎಂಬಾತನನ್ನು ಬಂಧಿಸಿರುವ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು, ಆತನಿಂದ ₹3,322 ಮೌಲ್ಯದ ಮದ್ಯವನ್ನು ಜಪ್ತಿ ಮಾಡಿದ್ದಾರೆ.

ದಂಡ ವಸೂಲಿ:ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ನಡೆಸಿರುವ ಅವಳಿನಗರ ಪೊಲೀಸರು 241 ಪ್ರಕರಣ ದಾಖಲಿಸಿ, ₹2.30 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.