ADVERTISEMENT

ರಾಜ್ಯ ಸರ್ಕಾರ ನಿಷ್ಕ್ರೀಯ: ಮೊಯಿಲಿ

ಅಧಿಕಾರ ವಿಕೇಂದ್ರೀಕರಣ, ಪ್ರಜಾಪ್ರಭುತ್ವವನ್ನು ಗೌರವಿಸದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 16:11 IST
Last Updated 16 ಮಾರ್ಚ್ 2022, 16:11 IST
ವೀರಪ್ಪ ಮೊಯಿಲಿ
ವೀರಪ್ಪ ಮೊಯಿಲಿ   

ಹುಬ್ಬಳ್ಳಿ: ‘ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ನಿಷ್ಕ್ರೀಯವಾಗಿದೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಪಾಲಿಕೆಗಳ ಚುನಾವಣೆ ನಡೆದು ತಿಂಗಳುಗಳಾದರೂ, ಮೇಯರ್ ಮತ್ತು ಉಪ ಮೆಯರ್‌ ಸ್ಥಾನಕ್ಕೆ ಚುನಾವಣೆ ನಡೆಸಿಲ್ಲ. ಅವಧಿ ಮುಗಿದರೂ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸದ ಸರ್ಕಾರ, ಅಧಿಕಾರ ವಿಕೇಂದ್ರೀಕರಣ ಮತ್ತು ಪ್ರಜಾಪ್ರಭುತ್ವಕ್ಕೆ ಅಗೌರವ ತೋರುತ್ತಿದೆ’ ಎಂದು ಕಾಂಗ್ರೆಸ್ ನಾಯಕ ಎಂ. ವೀರಪ್ಪ ಮೊಯಿಲಿ ವಾಗ್ದಾಳಿ ನಡೆಸಿದರು.

‘ನಿದ್ರಾವಸ್ಥೆಯಲ್ಲಿರುವ ಸರ್ಕಾರ ನ್ಯಾಯಯುತವಾದ ಕರ್ತವ್ಯವನ್ನು ನಿಭಾಯಿಸದೆ, ಅರಾಜಕತೆಗೆ ದಾರಿ ಮಾಡಿಕೊಡುತ್ತಿದೆ. ಮನಬಂದಂತೆತೆರಿಗೆ ಹೆಚ್ಚಿಸುತ್ತಿದೆ. ನಿರಂಕುಶ ಪ್ರಭುತ್ವವಾಗಿರುವ ರಾಜ್ಯ ಸರ್ಕಾರಕ್ಕೆ ಬುದ್ಧಿ ಹೇಳುವಲ್ಲಿ ಬಿಜೆಪಿ ಹೈಕಮಾಂಡ್‌ ವಿಫಲವಾಗಿದೆ. ಆ ಪಕ್ಷದ ಉಸ್ತುವಾರಿಗಳು ರಾಜ್ಯಕ್ಕೆ ಕೇವಲ ವಸೂಲಿಗೆ ಬಂದು ಹೋಗುತ್ತಿರಬೇಕು’ ಎಂದು ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

‘ಕಿವಿ ಹಿಂಡುತ್ತೇವೆ’

ADVERTISEMENT

‘ಚುನಾವಣೆ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ, ಕಾಯ್ದೆಗಳ ಕುರಿತು ಸರಿಯಾದ ಸ್ಪಷ್ಟತೆಯನ್ನು ನೀಡಿಲ್ಲ. ರಾಜ್ಯದಲ್ಲೂ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಇಂತಹ ವಿಷಯಗಳ ಬಗ್ಗೆ ದನಿ ಎತ್ತುವಂತೆ, ರಾಜ್ಯ ಕಾಂಗ್ರೆಸ್‌ ನಾಯಕರ ಕಿವಿ ಹಿಂಡುತ್ತೇವೆ’ ಎಂದರು.

‘ಕಾವೇರಿ ನ್ಯಾಯಮಂಡಳಿಯಲ್ಲಿ ಕುಡಿಯುವ ನೀರಿನ ವಿಷಯವು ಈಗಾಗಲೇ ತೀರ್ಮಾನವಾಗಿದೆ. ಆದರೂ, ಮೇಕೆದಾಟು ಯೋಜನೆಯನ್ನು ವಿವಾದವಾಗಿಸಲಾಗುತ್ತಿದೆ. ಮಹದಾಯಿ ವಿಷಯವು ಗೋವಾದ ಪ್ರಾದೇಶಿಕ ವಿಷಯವಾಗಿರುವುದರಿಂದ, ಅಲ್ಲಿನ ಕಾಂಗ್ರೆಸ್‌ಗೆ ಅದು ಮುಖ್ಯವಾಗಿದೆ. ಅಂತೆಯೇ, ನಮಗೂ ಪ್ರಮುಖ ವಿಷಯವಾಗಿರುವುದರಿಂದ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ಹಾಗೂ ಪಕ್ಷಾತೀತವಾದ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಡಬಲ್ ಎಂಜಿನ್ ಸರ್ಕಾರವಿದ್ದರೂ ಯೋಜನೆ ಜಾರಿಯಾಗಿಲ್ಲ’

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಉತ್ತರ ಕರ್ನಾಟಕದ ಮಹದಾಯಿ ಮತ್ತು ಕಳಸ–ಬಂಡೂರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಡಬಲ್ ಎಂಜಿನ್ ಸರ್ಕಾರ ನಮ್ಮದು ಎನ್ನುವ ಬಿಜೆಪಿ, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಯಾಕೆ ಈ ಯೋಜನೆಗಳನ್ನು ಜಾರಿಗೊಳಿಸಲಿಲ್ಲ’ ಎಂದು ಮೊಯಿಲಿ ಪ್ರಶ್ನಿಸಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಗೋವಾಗೆ ಭೇಟಿ ನೀಡಿ, ಮಹದಾಯಿ ವಿವಾದ ಬಗೆಹರಿಸಿಕೊಳ್ಳಲು ಅಲ್ಲಿಯವರನ್ನು ಒಪ್ಪಿಸಿದ್ದೆ. ನಂತರ ಬಂದ ಎಚ್‌.ಡಿ. ದೇವೇಗೌಡ ಅವರ ಸರ್ಕಾರ, ಆ ವಿಷಯವನ್ನು ಫಾಲೋಅಪ್ ಮಾಡಲಿಲ್ಲ. ಕಡೆಗೆ ನಾವು ನ್ಯಾಯಮಂಡಳಿ ರಚಿಸಿದ್ದರಿಂದ ನೀರು ಹಂಚಿಕೆಯಾಯಿತು. ಬಿಜೆಪಿ ಈಗ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಹೀಗಾಗಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದು ಹೇಳಿದರು.

ಮುಖಂಡರಾದ ಬಿ.ಆರ್.‌ ಪಾಟೀಲ, ಎ.ಎಂ. ಹಿಂಡಸಗೇರಿ, ಸದಾನಂದ ಡಂಗನವರ ಹಾಗೂ ವಸಂತ ಲದವಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.