ADVERTISEMENT

ಸ್ಥಗಿತಗೊಂಡ ರಾಜ ಕಾಲುವೆ ಸಮೀಕ್ಷೆ!

ಎರಡು ದಿನಗಳಲ್ಲಿ 2.10 ಕಿ.ಮೀ. ಸಮೀಕ್ಷೆ ನಡೆಸಿದ್ದ ಅಧಿಕಾರಿಗಳು

ನಾಗರಾಜ್ ಬಿ.ಎನ್‌.
Published 10 ಸೆಪ್ಟೆಂಬರ್ 2019, 20:31 IST
Last Updated 10 ಸೆಪ್ಟೆಂಬರ್ 2019, 20:31 IST

ಹುಬ್ಬಳ್ಳಿ: ರಾಜು ಕಾಲುವೆ ಒತ್ತುವರಿ ಮಾಡಿಕೊಂಡಿರುವುದರ ಸಮೀಕ್ಷೆ ಹದಿನೈದು ದಿನದ ಒಳಗೆ ಪೂರ್ಣಗೊಳ್ಳಲಿದೆ ಎಂದು ಪಾಲಿಕೆ ತಿಳಿಸಿತ್ತು. ಆದರೆ, ಸಮೀಕ್ಷೆ ಆರಂಭಿಸಿದ ಪಾಲಿಕೆ ಹಾಗೂ ಭೂ ಮಾಪನಾ ಇಲಾಖೆ ಅಧಿಕಾರಿಗಳು ಎರಡೇ ದಿನಕ್ಕೆ ಕಾರ್ಯ ಸ್ಥಗಿತಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕಾಲುವೆ ಒತ್ತುವರಿ ಮಾಡಿಕೊಂಡಿರುವ ಬಿಲ್ಡರ್ಸ್‌ಗಳು ಮತ್ತು ಕೆಲವು ನಿವಾಸಿಗಳು ಜನಪ್ರತಿನಿಧಿಗಳಿಗೆ ಒತ್ತಡ ಹಾಕಿದ್ದರಿಂದ ಸಮೀಕ್ಷೆ ಕಾರ್ಯ ಕೈ ಬಿಡಲಾಗಿದೆ ಎನ್ನುವ ಮಾತಗಳು ಪಾಲಿಕೆ ಆವರಣದಲ್ಲಿ ಕೇಳಿ ಬರುತ್ತಿದೆ.

ಆಗಸ್ಟ್‌ 26ರಂದು ಉಣಕಲ್‌ ಕೆರೆಯಿಂದ ಹನುಮಂತ ನಗರದವರೆಗೆ 1.10 ಕಿ.ಮೀ, ಮರು ದಿನ ಹನುಮಂತ ನಗರದಿಂದ ದೇವಿನಗರ ಬ್ರಿಡ್ಜ್‌ವರೆಗೆ ಒಂದು ಕಿ.ಮೀ. ಸಮೀಕ್ಷೆ ನಡೆಸಿದ್ದರು.

ADVERTISEMENT

ಎರಡು ದಿನಗಳಲ್ಲಿ ನಡೆದ ಸಮೀಕ್ಷೆ ಕಾರ್ಯ ನೋಡಿ ವಾರದ ಒಳಗೆ ಗಬ್ಬೂರಿನವರೆಗಿನ 8.5 ಕಿ.ಮೀ. ರಾಜ ಕಾಲುವೆ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂದು ಸಾರ್ವಜನಿಕರು ಭಾವಿಸಿದ್ದರು. ಆದರೆ, ಏಕಾಏಕಿ ಸಮೀಕ್ಷೆ ಕಾರ್ಯವನ್ನೇ ಸ್ಥಗಿತಗೊಳಿಸಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಲು ಕಾರಣವಾಗಿದೆ.

‘ಸಮೀಕ್ಷೆ ಕಾರ್ಯ ನಿಲ್ಲಿಸುವಂತೆ ಯಾರಿಂದಲೂ ಒತ್ತಡ ಬಂದಿಲ್ಲ. ಮಳೆಯಿಂದಾಗಿ ಸಮೀಕ್ಷೆ ಮುಂದೂಡಲಾಗಿದೆ’ ಎಂದು ಪಾಲಿಕೆ ಆಯುಕ್ತ ಇಟ್ನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಬ್ಬಂದಿ ಕೊರತೆಯಿಂದಾಗಿ ಸಮೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಪಾಲಿಕೆ ವಲಯ ಕಚೇರಿ ಅಧಿಕಾರಿಗಳು ಸಹ ನಮ್ಮ ಜತೆ ಇರಬೇಕಾಗುತ್ತದೆ. ಕಾಟಾಚಾರಕ್ಕೆ ಸಮೀಕ್ಷೆ ನಡೆಸಿ ವರದಿ ಒಪ್ಪಿಸಿದರೆ, ಅಕ್ಕ–ಪಕ್ಕದ ಖಾಸಗಿ ಜಾಗದವರಿಗೆ ಮುಂದೆ ಸಮಸ್ಯೆಯಾಗುತ್ತದೆ’ ಎಂದು ಪಾಲಿಕೆ ಸರ್ವೆಯರ್‌ ಮಂಜುನಾಥ ಬಾಗಲಕೋಟೆ ತಿಳಿಸಿದರು.

‘ಎರಡು ಕಿ.ಮೀ. ಸಮೀಕ್ಷೆ ಕಾರ್ಯ ಸುಲಭವಾಗಿ ನಡೆದಿದೆ. ಮುಂದಿನ ಪ್ರದೇಶದಲ್ಲಿ ಕಾಲುವೆ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳು ಸಾಕಷ್ಟಿವೆ. ನಗರ ಪ್ರದಶದ ಒಳಗೆ ಕಾಲುವೆ ಹಾದು ಹೋಗಿರುವುದರಿಂದ ಅಳತೆ ಪಟ್ಟಿ ಸಹಾಯದಿಂದ ಸರಳವಾಗಿ ಸಮೀಕ್ಷೆ ನಡೆಸಲು ಆಗುವುದಿಲ್ಲ. ಅಗತ್ಯ ಸಿಬ್ಬಂದಿ ಇದ್ದಾಗ ಮಾತ್ರ ಸರಿಯಾಗಿ ಸಮೀಕ್ಷೆ ನಡೆಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.