ADVERTISEMENT

ಬಳಕೆಯಾಗದ ವ್ಯಾಪಾರಿಗಳ ತಾತ್ಕಾಲಿಕ ಶೆಡ್‌: ಹುಬ್ಬಳ್ಳಿ ಜನತಾ ಬಜಾರ್ ಸಮಸ್ಯೆ

ಜನತಾ ಬಜಾರ್ ಸುತ್ತಲಿನ ರಸ್ತೆಗಳಲ್ಲಿ ಮುಂದುವರಿದ ಬೀದಿ ವ್ಯಾಪಾರ; ಸಂಚಾರ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 20:45 IST
Last Updated 15 ನವೆಂಬರ್ 2021, 20:45 IST
ಹುಬ್ಬಳ್ಳಿಯ ಗೋಕುಲ ರಸ್ತೆಯ ಕ್ಲಾರ್ಕ್ಸ್ ಇನ್ ಹೋಟೆಲ್ ಬಳಿಯ ಖಾಲಿ ಜಾಗದಲ್ಲಿ ಜನತಾ ಬಜಾರ್ ಬೀದಿ ವ್ಯಾಪಾರಿಗಳಿಗಾಗಿ ಮಹಾನಗರ ಪಾಲಿಕೆ ತಾತ್ಕಾಲಿಕ ವ್ಯವಸ್ಥೆ ಮಾಡಿರುವುದು – ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಗೋಕುಲ ರಸ್ತೆಯ ಕ್ಲಾರ್ಕ್ಸ್ ಇನ್ ಹೋಟೆಲ್ ಬಳಿಯ ಖಾಲಿ ಜಾಗದಲ್ಲಿ ಜನತಾ ಬಜಾರ್ ಬೀದಿ ವ್ಯಾಪಾರಿಗಳಿಗಾಗಿ ಮಹಾನಗರ ಪಾಲಿಕೆ ತಾತ್ಕಾಲಿಕ ವ್ಯವಸ್ಥೆ ಮಾಡಿರುವುದು – ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ನಗರದ ಜನತಾ ಬಜಾರ್‌ನ ಬೀದಿಬದಿ ವ್ಯಾಪಾರಿಗಳು ಹಾಗೂ ಕಿರಾಣಿ ಅಂಗಡಿಗಳ ಮಾಲೀಕರಿಗೆ, ಮಹಾನಗರ ಪಾಲಿಕೆಯು ಹೊಸೂರು ವೃತ್ತ ಮತ್ತು ಗೋಕುಲ ರಸ್ತೆಯ ಕ್ಲಾರ್ಕ್ಸ್‌ ಇನ್ ಹೋಟೆಲ್ ಬಳಿ ನಿರ್ಮಿಸಿರುವ ತಾತ್ಕಾಲಿಕ ಶೆಡ್‌ಗಳು ಬಳಕೆಯಾಗದೆ ದೂಳು ಹಿಡಿದಿವೆ. ಇತ್ತ ಜನತಾ ಬಜಾರ್‌ ಸುತ್ತಮುತ್ತಲಿನ ರಸ್ತೆಗಳಲ್ಲಿ ಎಂದಿನಂತೆ ಬೀದಿ ವ್ಯಾಪಾರ ಮುಂದುವರಿದಿದೆ.

ಸ್ಮಾರ್ಟ್ ಸಿಟಿಯಿಂದ ಜನತಾ ಬಜಾರ್‌ ಸ್ಥಳದಲ್ಲಿ ನೂತನ ಮಾರುಕಟ್ಟೆಯ ಕಟ್ಟಡ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ, ವ್ಯಾಪಾರಿಗಳನ್ನು ಸ್ಥಳಾಂತರಿಸಲು ಪಾಲಿಕೆ ನಿರ್ಧರಿಸಿತ್ತು.

‘ಹೊಸ ಕಟ್ಟಡ ನಿರ್ಮಾಣ ಹಿನ್ನೆಲೆಯಲ್ಲಿ, ಅಲ್ಲಿದ್ದ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ನಮ್ಮ ಜವಾಬ್ದಾರಿ. ಅಂತೆಯೇ ವ್ಯಾಪಾರಿಗಳ ಗಮನಕ್ಕೆ ತಂದು, ಪಾಲಿಕೆಯ ಖಾಲಿ ಜಾಗದಲ್ಲಿ ತಾತ್ಕಾಲಿಕವಾಗಿ ₹30 ಲಕ್ಷ ವೆಚ್ಚದಲ್ಲಿ ಶೆಡ್ ನಿರ್ಮಿಸಿದ್ದೆವು. ಆದರೆ, ಸ್ಥಳ ಬದಲಾಗಿದ್ದರಿಂದ ಗ್ರಾಹಕರೇ ಬರುತ್ತಿಲ್ಲ ಎಂದು ವ್ಯಾಪಾರಿಗಳು ಮತ್ತೆ ರಸ್ತೆ ಬದಿ ಬಂದು ಕುಳಿತಿದ್ದಾರೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್ ಹೇಳಿದರು.

ADVERTISEMENT

‘ಸದ್ಯ ಹೊಸೂರಿನಲ್ಲಿ ಕೆಲ ಕಿರಾಣಿ ಅಂಗಡಿಯವರು ಇದ್ದಾರೆ. ಉಳಿದವರು ಜನತಾ ಬಜಾರ್ ಸುತ್ತಮುತ್ತ ವ್ಯಾಪಾರ ಮಾಡುತ್ತಿದ್ದಾರೆ. ವ್ಯಾಪಾರವಾಗದ ಜಾಗಕ್ಕೆ ಹೋಗಿ ಎಂದು ಅವರಿಗೆ ಬಲವಂತ ಮಾಡಲಾಗದು. ಕಟ್ಟಡ ಕಾಮಗಾರಿಗೆ ತೊಂದರೆಯಾಗದಂತೆ ಅವರು ವ್ಯಾಪಾರ ಮುಂದುವರಿಸಿಕೊಂಡು ಹೋದರೆ ಯಾವುದೇ ತೊಂದರೆ ಇಲ್ಲ’ ಎಂದರು.

ಸಂಚಾರಕ್ಕೆ ತೊಂದರೆ

ಜನತಾ ಬಜಾರ್ ಸುತ್ತಲಿನ ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನಪೇಟೆ ರಸ್ತೆ, ಸೂಪರ್ ಮಾರ್ಕೆಟ್ ರಸ್ತೆಗಳು ದಿನವಿಡೀ ಜನ ಹಾಗೂ ವಾಹನಗಳಿಂದ ಗಿಜಿಗುಡುತ್ತಿರುತ್ತವೆ. ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾದರೂ ಸ್ಥಳಾಂತರಗೊಳ್ಳದ ವ್ಯಾಪಾರಿಗಳು, ರಸ್ತೆಗಳಲ್ಲೇ ವ್ಯಾಪಾರ ಮುಂದುವರಿಸಿರುವುದರಿಂದ ಸದ್ಯ ಇಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ.

‘ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿಗೆ ಈ ರಸ್ತೆಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಇರುತ್ತದೆ. ವಾಹನಗಳನ್ನು ನಿಲ್ಲಿಸಲು ಜಾಗವೇ ಸಿಗುವುದಿಲ್ಲ. ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಬಂದು, ತರಕಾರಿ ಹಾಗೂ ಕಿರಾಣಿ ಸಾಮಗ್ರಿಗಳನ್ನು ಖರೀದಿಸಬೇಕಾಗಿದೆ. ಅನಿವಾರ್ಯವಾಗಿರುವುದರಿಂದ ಒಂದಿಷ್ಟು ದಿನಗಳು ಎಲ್ಲರೂ ಸಹಿಸಿಕೊಳ್ಳಬೇಕಾಗಿದೆ’ ಎಂದು ಗ್ರಾಹಕ ಪ್ರದೀಪ ಹಿರೇಮಠ ಅಭಿಪ್ರಾಯಪಟ್ಟರು.

‘ಗ್ರಾಹಕರಿಲ್ಲದಿದ್ದರೆ ವ್ಯಾಪಾರ ಹೇಗೆ?’

‘ಚನ್ನಮ್ಮ ವೃತ್ತಕ್ಕೆ ಹೊಂದಿಕೊಂಡಂತಿರುವ ಜನತಾ ಬಜಾರ್‌ ಹಾಗೂ ಸುತ್ತಲಿನ ರಸ್ತೆಗಳಲ್ಲಿಹಲವು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದೇವೆ. ಹೊಸ ಮಾರುಕಟ್ಟೆ ನಿರ್ಮಾಣ ಹಿನ್ನೆಲೆಯಲ್ಲಿ, ಪಾಲಿಕೆಯವರು ತಾತ್ಕಾಲಿಕವಾಗಿ ಶೆಡ್ ಹಾಕಿ ಕೊಟ್ಟಿದ್ದಾರೆ. ಆದರೆ, ಅಲ್ಲಿಗೆ ಜನರೇ ಬರುವುದಿಲ್ಲ. ಹೀಗಾದರೆ, ವ್ಯಾಪಾರ ಮಾಡೋದು ಹೇಗೆ? ನಮ್ಮ ಬದುಕು ಹೇಗೆ ನಡೆಯಬೇಕು?’ ಎಂದು ಬೀದಿ ವ್ಯಾಪಾರಿಯೂ ಆಗಿರುವ ಸಣ್ಣ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ವಾಲ್ಮೀಕಿ ‘ಪ್ರಜಾವಾಣಿ’ಯೊಂದಿಗೆ ಅಸಹಾಯಕತೆ ತೋಡಿಕೊಂಡರು.

ಅಂಕಿ ಅಂಶ...

₹18.36 ಕೋಟಿ

ಜನತಾ ಬಜಾರ್‌ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಮಾರುಕಟ್ಟೆ ಕಟ್ಟಡ ಕಾಮಗಾರಿ ಮೊತ್ತ

18 ತಿಂಗಳು

ಕಾಮಗಾರಿ ಅವಧಿ

₹30 ಲಕ್ಷ

ಬೀದಿ ವ್ಯಾಪಾರಿಗಳ ಸ್ಥಳಾಂತರಕ್ಕೆ ಮೀಸಲಿಟ್ಟಿದ್ದ ಮೊತ್ತ

177

ಜನತಾ ಬಜಾರ್‌ನಲ್ಲಿರುವ ಕಟ್ಟಾ ಅಂಗಡಿಗಳು

50

ಕಿರಾಣಿ ಅಂಗಡಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.