ADVERTISEMENT

‘ಎಡ್ಯುವರ್ಸ್: ಭರಪೂರ ಮಾಹಿತಿ; ಗೊಂದಲಗಳಿಗೆ ಮುಕ್ತಿ

ಜ್ಞಾನದೇಗುಲ’ದ 11ನೇ ಶೈಕ್ಷಣಿಕ ಮಾರ್ಗದರ್ಶನ ಮೇಳ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 13:57 IST
Last Updated 1 ಜೂನ್ 2019, 13:57 IST

ಹುಬ್ಬಳ್ಳಿ: ಪಿಯುಸಿ ಬಳಿಕ ಯಾವ ಕೋರ್ಸ್‌ ಆಯ್ಕೆ ಮಾಡಿಕೊಂಡರೆ ಸೂಕ್ತ? ಎಂಜಿನಿಯರಿಂಗ್, ವೈದ್ಯಕೀಯ, ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಹೇಗೆ? ಕೌನ್ಸೆಲಿಂಗ್ ಹೇಗೆ ನಡೆಯುತ್ತದೆ? ಅಗತ್ಯ ದಾಖಲೆಗಳು ಏನಿರಬೇಕು? ಪ್ರವೇಶ ಶುಲ್ಕ, ಶೈಕ್ಷಣಿಕ ಸಾಲ, ಅತ್ಯುತ್ತಮ ಕಾಲೇಜುಗಳ ಯಾವುವು...?

ಹೀಗೆ... ಪಿಯುಸಿ ನಂತರ ಮುಂದೇನು? ಎಂಬ ವಿದ್ಯಾರ್ಥಿಗಳ ಮತ್ತು ಪಾಲಕರ ಮನಸ್ಸಿನ ಹಲವು ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿಯ ಗೋಕುಲ ಗಾರ್ಡನ್‌ನಲ್ಲಿ ಶನಿವಾರ ನಡೆದ ‘ಎಡ್ಯುವರ್ಸ್: ಜ್ಞಾನದೇಗುಲ’ದ 11ನೇ ಶೈಕ್ಷಣಿಕ ಮಾರ್ಗದರ್ಶನ ಮೇಳ ಉತ್ತರ ಒದಗಿಸಿತು.

ಮಕ್ಕಳ ಭವಿಷ್ಯಕ್ಕೆ ಮಾರ್ಗದರ್ಶಿಯಾಗುವ ಕೋರ್ಸ್‌ಗಳ ಮಾಹಿತಿಯನ್ನು ವಿದ್ಯಾರ್ಥಿಗಳಷ್ಟೇ ಉತ್ಸಾಹದಲ್ಲಿ, ಪೋಷಕರೂ ಪಡೆದು ತಮ್ಮಲ್ಲಿದ್ದ ಗೊಂದಲಗಳಿಗೆ ತಜ್ಞರಿಂದ ಪರಿಹಾರ ಕಂಡುಕೊಂಡರು.

ADVERTISEMENT

ಮೇಳ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ, ‘ತಮ್ಮ ಈಡೇರದ ಬಯಕೆಗಳನ್ನು ಮಕ್ಕಳ ಮೇಲೆ ಹೇರದೆ, ಅವರ ಮನಸ್ಸಿನ ಮಾತು ಆಲಿಸಿ. ಅವರಿಗಿಷ್ಟವಾಗುವ ವಿಷಯ ಯಾವುದೆಂದು ತಿಳಿದುಕೊಳ್ಳಿ. ಅವರಿಚ್ಛಿಸುವ ಕೋರ್ಸ್ ಕೊಡಿಸಿದರೆ, ಮುಂದೆ ಚನ್ನಾಗಿ ಓದಿ ನಿಮಗೆ ಕೀರ್ತಿ ತರುತ್ತಾರೆ’ ಎಂದು ತಂದೆ–ತಾಯಿಗಳಿಗೆಕಿವಿಮಾತು ಹೇಳಿದರು.

ಇನ್ನು ವಿಷಯ ತಜ್ಞರಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಎಸ್. ರವಿ, ‘ಸಿಇಟಿ ಮತ್ತು ನೀಟ್ ಪ್ರವೇಶ ಪ್ರಕ್ರಿಯೆ’ ಕುರಿತು ಮಾಹಿತಿ ನೀಡಿ, ವಿದ್ಯಾರ್ಥಿಗಳು ಮತ್ತು ಪೋಷಕರ ಗೊಂದಲಗಳಿಗೆ ತೆರೆ ಎಳೆದರು. ಅದರಂತೆ, ಡಾ. ಶಾಂತರಾಮ್ ನಾಯಕ್ ಕಾಮೆಡ್‌–ಕೆ ಬಗ್ಗೆ ವಿಸ್ತೃತವಾಗಿ ವಿವರಿಸಿದರು. ಇದರ ಜತೆಗೆ, ಶುಲ್ಕ ಪಾವತಿ, ರೀಫಂಡ್ ಹಾಗೂ ಶೈಕ್ಷಣಿಕ ಸಾಲ ಲಭ್ಯತೆ ಬಗ್ಗೆಯೂ ಮಾಹಿತಿ ನೀಡಿದರು.

ವಿಷಯ ತಜ್ಞರ ಉಪನ್ಯಾಸದ ನಂತರ, ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರಶ್ನೆ ಕೇಳಿ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಎಡ್ಯುವರ್ಸ್ ವೇದಿಕೆಯಾಯಿತು. ಮೊದಲ ದಿನದ ಮೇಳದಲ್ಲಿ ಭಾಗವಹಿಸಿದ್ದವರು ತಮ್ಮ ಗೊಂದಲಗಳನ್ನು ಜ್ಞಾನದೇಗುಲದಲ್ಲಿ ಪರಿಹಾರ ಪಡೆದು, ರಿಲ್ಯಾಕ್ಸ್ ಆಗಿ ಮನೆಯತ್ತ ಹೆಜ್ಜೆ ಹಾಕಿದರು.

ಕರಜಗಿ ಅವರ ಒಂದು ತಾಸಿನ ಸ್ಫೂರ್ತಿಯ ಮಾತುಗಳಿಗೆ ಮಾರುಹೋದ ಮಂದಿ, ಮೇಳದ ಕಡೆಯಲ್ಲಿ ಅವರನ್ನು ಮುತ್ತಿಕೊಂಡು ಮಾತನಾಡಿಸಿದ ದೃಶ್ಯ ಕಂಡುಬಂತು. ಮೇಳದಲ್ಲಿ ವಿದ್ಯಾರ್ಥಿಗಳಷ್ಟೇ ಸಂಖ್ಯೆಯಲ್ಲಿ ಪಾಲಕರೂ ಪಾಲ್ಗೊಂಡಿದ್ದು ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.