ಉಪ್ಪಿನಬೆಟಗೇರಿ: ‘ಮನುಷ್ಯನ ಪ್ರತಿ ಸಮಸ್ಯೆಗೆ ಶರಣರ ವಚನಗಳಲ್ಲಿ ಪರಿಹಾರವಿದ್ದು, ನಾವೆಲ್ಲ ಶರಣ ಸಂಸ್ಕೃತಿಯ ಅಧ್ಯಯನ ಮಾಡುವ ಅಗತ್ಯವಿದೆ’ ಎಂದು ಸ್ಥಳೀಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.
ಗ್ರಾಮದ ಮೂರುಸಾವಿರ ವಿರಕ್ತಮಠದಲ್ಲಿ ಅಕ್ಕನ ಬಳಗ ಮತ್ತು ಗೆಳೆಯರ ಬಳಗದಿಂದ ಗುರುವಾರ ಜರುಗಿದ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಪ್ರತಿ ತಿಂಗಳು ಹುಣ್ಣಿಮೆ ದಿನ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ’ ಎಂದರು.
ಸನ್ಮಾನ ಸ್ವೀಕರಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಶ್ರೀಶೈಲ ಹುದ್ದಾರ ಮಾತನಾಡಿ, ‘ಮಾತೃ ಭಾಷಾ ಕಲಿಕೆಯಿಂದ ಮಾತ್ರ ಈ ನೆಲದ ಸೊಗಡು ಉಳಿಯಲು ಸಾಧ್ಯ. ಆಧುನಿಕತೆಯ ಭರಾಟೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಎಲ್ಲರ ಕರ್ತವ್ಯ. ನಮ್ಮ ಭಾಷೆ ಕನ್ನಡವಾಗಿದ್ದರೂ ನಿತ್ಯವೂ ಅನ್ಯ ಭಾಷೆ ಬಳಸುವುದು ಕಳವಳಕಾರಿ ಸಂಗತಿ’ ಎಂದರು.
ಗ್ರಾಮದ ನಾಗಪ್ಪ ಪೂಜಾರ, ಪತ್ರಕರ್ತ ಪ್ರಕಾಶ ಹೂಗಾರ ಅವರನ್ನು ಸನ್ಮಾನಿಸಲಾಯಿತು. ಕಸ್ತೂರಿ ಯಲಿಗಾರ ಅಕ್ಕಮಹಾದೇವಿ ಜೀವನದ ಕುರಿತು ಮಾತನಾಡಿದರು. ಸ್ಥಳೀಯ ಶಾಲಾ ಮಕ್ಕಳು ಶರಣರ ವಚನಗಳನ್ನು ಹೇಳಿದರು.
ವೀರಣ್ಣ ಪರಾಂಡೆ, ಚನ್ನಬಸಪ್ಪ ಮಸೂತಿ, ರಾಮಲಿಂಗಪ್ಪ ನವಲಗುಂದ, ಕಾಶಪ್ಪ ದೊಡವಾಡ, ಫಕ್ಕೀರಪ್ಪ ಮಡಿವಾಳರ, ಸಂಜು ಕೊಡಿಮಠ, ಸಿದ್ರಾಯಪ್ಪ ವಾಲಿ, ಸುರೇಶಬಾಬು ತಳವಾರ, ಕಲಾವತಿ ಮಸೂತಿ, ಸುನಂದಾ ಮಡಿವಾಳರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.