ADVERTISEMENT

ಸಕಾಲಕ್ಕೆ ಸಿಎಆರ್‌ ಭದ್ರತೆ ಸಿಗದ ಆರೋಪ

ಕೈದಿಗಳನ್ನು ಆಸ್ಪತ್ರೆ, ನ್ಯಾಯಾಲಯಕ್ಕೆ ಕರೆದೊಯ್ಯಲು ತೊಂದರೆ

ಎಂ.ನವೀನ್ ಕುಮಾರ್
Published 24 ಡಿಸೆಂಬರ್ 2018, 16:30 IST
Last Updated 24 ಡಿಸೆಂಬರ್ 2018, 16:30 IST
   

ಹುಬ್ಬಳ್ಳಿ: ಇಲ್ಲಿನ ಉಪ ಕಾರಾಗೃಹದ ಕೈದಿಗಳನ್ನು ಹೊರಗೆ ಕರೆದೊಯ್ಯಬೇಕಾದ ಸಂದರ್ಭಗಳಲ್ಲಿ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್‌) ಸಕಾಲಕ್ಕೆ ಭದ್ರತೆ ಒದಗಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಪರಿಣಾಮ, ಅಗತ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ಕೈದಿಗಳನ್ನು ಹೊರಗೆ ಕರೆದುಕೊಂಡು ಹೋಗಬೇಕಾದಾಗ ಕಾರಾಗೃಹ ಸಿಬ್ಬಂದಿ ಸಮಸ್ಯೆ ಎದುರಿಸುವಂತಾಗಿದೆ.

ಉಪ ಕಾರಾಗೃಹದಲ್ಲಿರುವ ಕೈದಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗುತ್ತದೆ. ಒಂದು ಜೈಲಿನಿಂದ ಇನ್ನೊಂದು ಜೈಲಿಗೆ ಸ್ಥಳಾಂತರಿಸುವ ಸಂದರ್ಭಗಳು ಉದ್ಭವಿಸುತ್ತವೆ. ಅಲ್ಲದೆ ತುರ್ತು ಸಂದರ್ಭಗಳಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗುತ್ತದೆ.

‘ಕೈದಿಗಳನ್ನು ಹೊರಗೆ ಕರೆದುಕೊಂಡು ಹೋದಾಗ ಅವರಿಗೆ ಯಾವುದೇ ರೀತಿಯ ತೊಂದರೆ, ಅಪಾಯ ಎದುರಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಅಲ್ಲದೆ ಅವರು ಪರಾರಿಯಾಗದಂತೆ ಸಹ ಎಚ್ಚರಿಕೆ ವಹಿಸಬೇಕಾಗುತ್ತದೆ. ಆದ್ದರಿಂದ ಸೂಕ್ತ ಭದ್ರತೆ ಬೇಕಾಗುತ್ತದೆ. ಈ ವಿಷಯದಲ್ಲಿ ಸಿಎಆರ್ ತುರ್ತಾಗಿ ಸ್ಪಂದಿಸುತ್ತಿಲ್ಲ’ ಎಂದು ದೂರುತ್ತಾರೆ ಕಾರಾಗೃಹದ ಅಧಿಕಾರಿಯೊಬ್ಬರು.

ADVERTISEMENT

‘ಕಾರಾಗೃಹ ಕೈಪಿಡಿಯ ಪ್ರಕಾರ ಭದ್ರತೆ ಇರಲೇಬೇಕು. ಅನಾರೋಗ್ಯದಂತಹ ತುರ್ತು ಸಂದರ್ಭಗಳಿದ್ದಾಗ ಭದ್ರತೆ ಇಲ್ಲದಿದ್ದರೆ ಅದು ಕೈದಿಯ ಜೀವಕ್ಕೇ ಎರವಾಗಬಹುದು. ಆದ್ದರಿಂದ ಮನವಿ ಮಾಡಿದ ಕೂಡಲೇ ಸ್ಪಂದಿಸಿದರೆ ಅನುಕೂಲವಾಗುತ್ತದೆ’ ಎಂದು ಅವರು ಹೇಳುತ್ತಾರೆ.

ಹುಬ್ಬಳ್ಳಿಯ ಉಪ ಕಾರಾಗೃಹಕ್ಕೆ ವಾರಕ್ಕೆ ಒಂದು ಬಾರಿ ಕಿಮ್ಸ್ ವೈದ್ಯರು ಬಂದು ಆರೋಗ್ಯ ತಪಾಸಣೆ ನಡೆಸುತ್ತಾರೆ. ಸಣ್ಣ– ಪುಟ್ಟ ಕಾಯಿಲೆ ಇದ್ದರೆ ಚಿಕಿತ್ಸೆ ನೀಡಿ ಹೋಗುತ್ತಾರೆ. ತೀವ್ರತರ ಕಾಯಿಲೆ ಇದ್ದಂತಹ ಸಂದರ್ಭದಲ್ಲಿ ಖುದ್ದು ಆಸ್ಪತ್ರೆಗೇ ಕರೆದುಕೊಂಡು ಬರುವಂತೆ ಸೂಚನೆ ನೀಡುತ್ತಾರೆ.

‘ನಾನು ಕೆಲ ಕಾಲ ಸಿಎಆರ್‌ ಪ್ರಭಾರ ಡಿಸಿಪಿಯಾಗಿದ್ದೆ. ಭದ್ರತೆ ಸಮಸ್ಯೆ ಬಗ್ಗೆ ಯಾವುದೇ ದೂರು ಬಂದಿರಲಿಲ್ಲ. ಸಾಮಾನ್ಯವಾಗಿ ಮನವಿ ಮಾಡಿದ ತಕ್ಷಣ ಸಿಬ್ಬಂದಿ ಕಳುಹಿಸಿಕೊಡಲಾಗುತ್ತದೆ. ದೊಡ್ಡ ಜಾತ್ರೆ, ಅತಿಗಣ್ಯ ವ್ಯಕ್ತಿಗಳು ಬಂದಂತಹ ಸಂದರ್ಭದಲ್ಲಿ ಮಾತ್ರ ಸ್ವಲ್ಪಏರುಪೇರಾಗಬಹುದು ಅಷ್ಟೇ’ ಎನ್ನುತ್ತಾರೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ.

ಸಮಸ್ಯೆ ಇದ್ದರೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬಹುದು ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.