ADVERTISEMENT

ನವಲಗುಂದ ಅಂಗನವಾಡಿಗೆ ಕಳಪೆ ಆಹಾರ ಧಾನ್ಯ ಪೂರೈಕೆ: ಶಾಸಕ ಆರೋಪ

ಆಹಾರ ಮಾದರಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 14:02 IST
Last Updated 2 ಏಪ್ರಿಲ್ 2019, 14:02 IST

ಹುಬ್ಬಳ್ಳಿ: ನವಲಗುಂದ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ 220 ಅಂಗನವಾಡಿಗಳಿಗೆ ಕಳಪೆ ಆಹಾರ ಧಾನ್ಯ ಪೂರೈಕೆ ಮಾಡಲಾಗುತ್ತಿದೆ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ದೂರು ನೀಡಿದ್ದಾರೆ.

ಈ ಬಗ್ಗೆ ತನಿಖೆಗೆ ಜಿಲ್ಲಾಧಿಕಾರಿ ಅವರು ಆದೇಶಿಸಿದ್ದು, ಬೆಳಗಾವಿಯ ಪ್ರಾದೇಶಿಕ ಆಹಾರ ಗುಣಮಟ್ಟ ಪರೀಕ್ಷಾ ಕೇಂದ್ರಕ್ಕೆ ಆಹಾರ ಧಾನ್ಯದ ಮಾದರಿಯನ್ನು ಕಳುಹಿಸಿಕೊಡಲಾಗಿದೆ.

‘ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಪೊಲೀಸ್ ಇನ್‌ಸ್ಪೆಕ್ಟರ್‌ ಅವರೊಂದಿಗೆ ದಾಸ್ತಾನು ದಾಸ್ತುನು ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಆಹಾರ ಮಾದರಿ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ ವರವಟ್ಟಿ ತಿಳಿಸಿದ್ದಾರೆ.

ADVERTISEMENT

‘ಮಹಿಳಾ ಪೂರಕ ಆಹಾರ ತಯಾರಿಕಾ ಕೇಂದ್ರದವರಿಗೆ (ಎಂಎಸ್‌ಪಿಟಿಸಿ) ಆಹಾರ ಧಾನ್ಯ ಪೂರೈಕೆಯ ಜವಾಬ್ದಾರಿ ನೀಡಲಾಗಿದೆ. ಅದಕ್ಕಾಗಿ ದರವನ್ನೂ ನಿಗದಿಪಡಿಸಲಾಗಿದೆ. ಮಾರುಕಟ್ಟೆಯಲ್ಲಿ ಆಹಾರ ಧಾನ್ಯ ಖರೀದಿಸುವ ಅವರು ಅದನ್ನು ಸಂಸ್ಕರಣೆ ಮಾಡಿ ಪೂರೈಕೆ ಮಾಡುತ್ತಾರೆ. ನಾವೂ ಸಹ ಆಗಾಗ್ಗೆ ಗುಣಮಟ್ಟ ಪರೀಕ್ಷೆ ಮಾಡುತ್ತೇವೆ ಹಾಗೂ ಅವರೊಂದಿಗೆ ಸಭೆ ಸಹ ನಡೆಸುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

‘ಆಹಾರ ಧಾನ್ಯಗಳ ದರವನ್ನು ಮೊದಲೇ ನಿಗದಿಪಡಿಸಲಾಗುವುದು. ಅದನ್ನು ಸಂಸ್ಕರಣೆ ಮಾಡುವುದರಿಂದ ಸಾಮಾನ್ಯವಾಗಿ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ನಿಗದಿಪಡಿಸಲಾಗುವುದು. ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಾದರೂ ನಿಗದಿತ ದರಕ್ಕೆ ಪೂರೈಕೆ ಮಾಡಬೇಕು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.