
ಹುಬ್ಬಳ್ಳಿ: ಬಾಳೆ, ಪಪ್ಪಾಯ ಸೇರಿದಂತೆ ವೈವಿಧ್ಯಮಯ ಹಣ್ಣುಗಳು, ಔಷಧೀಯ ಸಸ್ಯಗಳು, ಅರಣ್ಯ ಸಸಿಗಳು, ನುಗ್ಗೆ, ಕರಿಬೇವು ಸೇರಿದಂತೆ ವೈವಿಧ್ಯಮಯ ಬೆಳೆಗಳು ಧಾರವಾಡ ತಾಲ್ಲೂಕಿನ ಗರಗ ಗ್ರಾಮದ ಹದ್ದಿನಲ್ಲಿರುವ 5 ಎಕರೆ 37 ಗುಂಟೆ ಜಮೀನಿನಲ್ಲಿ ನಳನಳಿಸುತ್ತಿವೆ.
ಧಾರವಾಡ ಜಿಲ್ಲೆಯ ಕೋಟೂರು ಗ್ರಾಮದ ಕಲಾವತಿ ಚವನಗೌಡ್ರ ಅವರು ಪತಿ ಮಾರುತಿ ಹಂಚಿನಮನಿ ಅವರ ಸಹಕಾರದಲ್ಲಿ ಈ ಜಮೀನಿನಲ್ಲಿ ಸಮಗ್ರ ಕೃಷಿ ಜಗತ್ತನ್ನು ಕಟ್ಟಿದ್ದಾರೆ. ಮೂಲತಃ ಕೃಷಿ ಕುಟುಂಬದವರೇ ಆದ ಕಲಾವತಿ ಪದವೀಧರರಾಗಿಯೂ ಕೃಷಿ ಕಾಯಕದಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
2 ಎಕರೆಯಲ್ಲಿ ಜಿ–9 ಬಾಳೆಯನ್ನು 2 ವರ್ಷಗಳ ಹಿಂದೆ ನಾಟಿ ಮಾಡಲಾಗಿದೆ. 11 ತಿಂಗಳಿಗೆ ಫಲ ನೀಡಲಾರಂಭಿಸಿದ ಇವು ಈಗಾಗಲೇ ₹12.5 ಲಕ್ಷದಷ್ಟು ಆದಾಯ ನೀಡಿವೆ. ಒಂದು ಗೊನೆ 40 ರಿಂದ 50 ಕೆ.ಜಿಗಳಷ್ಟು ತೂಗುತ್ತದೆ. ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಯಲ್ಲಿ ಮಾರಾಟ ಮಾಡಲಾಗಿದೆ. ಕೆ.ಜಿಗೆ ಸರಾಸರಿ ₹36 ದರ ಲಭ್ಯವಾಗಿದೆ.
ಮಹಾರಾಷ್ಟ್ರದ ಜಲಗಾಂವ್‌ನ ಜೈನ್ ಕಂಪನಿಯಿಂದ ಅಂಗಾಂಶ ಕೃಷಿಯಲ್ಲಿ ಬೆಳೆದ 2,435 ಸಸಿಗಳನ್ನು ತಂದು ನಾಟಿ ಮಾಡಲಾಗಿತ್ತು. ರೋಗ ಮುಕ್ತವಾಗಿರುವುದೇ ಈ ಸಸಿಗಳ ವಿಶೇಷತೆ. ಒಮ್ಮೆ ನೆಟ್ಟ ನಂತರ 3 ಬಾರಿ ಫಲ ಪಡೆಯಬಹುದು. ಒಮ್ಮೆ ಕಟಾವಾದ ಗಿಡದ ಮರಿ ಸಸಿಗಳು ಬೆಳೆದಿರುತ್ತವೆ. ಅವುಗಳಿಂದಲೂ ಉತ್ತಮ ಫಲ ಸಿಗುತ್ತದೆ. 3 ವರ್ಷಗಳ ನಂತರ ಈ ಎಲ್ಲ ಸಸಿಗಳನ್ನು ತೆಗೆದು ಬೇರೆ ಕೃಷಿ ಮಾಡಬೇಕಾಗುತ್ತದೆ. ಆಗ ಮಾತ್ರ ಮಣ್ಣಿನ ಫಲವತ್ತತೆ ಉಳಿಸಿಕೊಳ್ಳಲು ಸಾಧ್ಯ ಎಂದು ವಿವರಿಸಿದರು.
ಒಂದು ಸಾವಿರದಷ್ಟು ಯಾಲಕ್ಕಿ ಬಾಳೆ ಬೆಳೆಯಲಾಗಿದೆ. ಬಾಳೆಗೊನೆ 12ರಿಂದ 15 ಕೆ.ಜಿಗಳಷ್ಟು ತೂಗುತ್ತದೆ. ₹1.80 ಲಕ್ಷದಷ್ಟು ಆದಾಯ ಲಭ್ಯವಾಗಿದೆ. ಇದರ ಒಂದು ಸಸಿಯ ಸುತ್ತ 5ರಿಂದ 6 ಮರಿಸಸಿಗಳು ಹುಟ್ಟುತ್ತವೆ. ದೀಪಾವಳಿ ಹಾಗೂ ಮಹಾನವಮಿ ಹಬ್ಬದ ಸಂದರ್ಭದಲ್ಲಿ ಇಂಥ ಬಾಳೆಮರಿಗಳ ಮಾರಾಟದಿಂದಲೇ ₹80 ಸಾವಿರದಷ್ಟು ಆದಾಯವಾಗಿದೆ. ಜೋಡಿಗೆ ₹ 20ರಂತೆ ತೋಟಕ್ಕೇ ಬಂದು ಖರೀದಿ ಮಾಡುತ್ತಾರೆ ಎಂದು ಕಲಾವತಿ ವಿವರಿಸಿದರು. ಯಾಲಕ್ಕಿ ಬಾಳೆಯೊಂದಿಗೆ ಅಡಿಕೆ ಸಸಿಗಳನ್ನು ನಡುವೆ ಹಾಕಲಾಗಿದೆ.
ಭಾಗ್ಯಾ ತಳಿಯ 400 ನುಗ್ಗೆ ಸಸಿಗಳನ್ನು ಬೆಳೆಸಲಾಗಿದ್ದು, ಕಳೆದ ವರ್ಷ ನುಗ್ಗೆಕಾಯಿ ಮಾರಾಟದಿಂದ ₹ 1.36 ಲಕ್ಷದಷ್ಟು ಆದಾಯ ಬಂದಿದೆ. ನಂ. 15 ತಳಿಯ ಪಪ್ಪಾಯದ 600 ಸಸಿಗಳು ಕಳೆದ 8 ತಿಂಗಳಿಂದ ಉತ್ತಮ ಫಲ ನೀಡುತ್ತಿವೆ. ₹2 ಲಕ್ಷದಷ್ಟು ಆದಾಯ ನೀಡಿವೆ. 300 ಕರಿಬೇವಿನ ಗಿಡಗಳನ್ನು ಬೆಳೆಸಲಾಗಿದೆ. ಅದರಿಂದಲೂ ಈಗಾಗಲೇ ₹ 65 ಸಾವಿರದಷ್ಟು ಆದಾಯ ಲಭಿಸಿದೆ. ಟೆನಿಸ್‌ಬಾಲ್ ತಳಿಯ ಕೇಸರಿ, ಹಳದಿ, ಬಣ್ಣದ ಚೆಂಡು ಹೂಗಳನ್ನು ಬೆಳೆದಿದ್ದು, ಹಬ್ಬದ ಸಂದರ್ಭದಲ್ಲಿ ₹1.30 ಲಕ್ಷದಷ್ಟು ಆದಾಯ ಬಂದಿದೆ. 300 ಸಾಗವಾನಿ ಗಿಡಗಳೂ ಬೆಳೆಯುತ್ತಿವೆ.
ಔಷಧೀಯ ಸಸಿಗಳು: ಉತ್ತಮ ಆದಾಯ ತರುವ ಬೆಳೆಗಳೊಂದಿಗೆ 25ಕ್ಕೂ ಹೆಚ್ಚು ವಿವಿಧ ದೇಶ–ವಿದೇಶದ ಹಣ್ಣುಗಳನ್ನು ಹವ್ಯಾಸವಾಗಿ ಬೆಳೆಯಲಾಗಿದೆ. ಪೇರಲ, ಸೀತಾಫಲ, ನೇರಳೆ, ಕವಳಿ, ಮರಸೇಬು, ಲಿಚಿ ಗಿಡಗಳು ಇವುಗಳಲ್ಲಿ ಸೇರಿವೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಶತಾವರಿ, ಅಶ್ವಗಂಧ, ಲೋಳೆಸರ, ಶಂಕಪುಷ್ಪ, ನಾಗದಾಳಿ, ಬ್ರಾಹ್ಮಿ, ಬಸಳೆ, ಬಜೆಬೇರಿ ಸೇರಿದಂತೆ 35ಕ್ಕೂ ಹೆಚ್ಚು ತರಹದ ಔಷಧೀಯ ಸಸಿಗಳನ್ನು ತಂದು ಬೆಳೆಸಲಾಗಿದ್ದು, ಇವುಗಳನ್ನು ಮನೆಯಲ್ಲೇ ಬಳಸಲಾಗುತ್ತದೆ.
ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದಿಂದ ಈಚೆಗೆ ನಡೆದ ತೋಟಗಾರಿಕಾ ಹಾಗೂ ಕೃಷಿ ಮೇಳದಲ್ಲಿ ಕಲಾವತಿ ಚವನಗೌಡ್ರ ಅವರಿಗೆ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ನಡೆದ ಫಲ–ಪುಷ್ಪ ಪ್ರದರ್ಶನದಲ್ಲೂ ಇವರು ಬೆಳೆದ ಬಾಳೆಗೊನೆಗೆ ಪ್ರಥಮ ಬಹುಮಾನ ಲಭಿಸಿರುವುದು ಇವರ ಕೃಷಿ ಯಶೋಗಾಥೆಯನ್ನು ಸಾರಿ ಹೇಳುತ್ತಿದೆ.
2 ಎಕರೆಯಲ್ಲಿ ಜಿ–9 ಬಾಳೆ ನಾಟಿ ಕೆ.ಜಿಗೆ ಸರಾಸರಿ ₹36 ದರ ಔಷಧೀಯ ಸಸಿಗಳ ಪೋಷಣೆ
ಹನಿ ನೀರಾವರಿ ಸಾವಯವ ಪದ್ಧತಿ ಪರಿಣಾಮಕಾರಿ ‘ಜಮೀನಿಗೆ ಹನಿ ನೀರಾವರಿ ಅಳವಡಿಸಲಾಗಿದ್ದು ಗೊಬ್ಬರವನ್ನೂ ಇದರ ಮೂಲಕವೇ ನೀಡಲಾಗುತ್ತದೆ. ಜೀವಾಮೃತ ಘಟಕ ಎರೆಹುಳು ಘಟಕವಷ್ಟೇ ಅಲ್ಲದೇ ಎರೆ ಜಲ ಘಟಕವನ್ನೂ ಜಮೀನಿನಲ್ಲಿ ಸ್ಥಾಪಿಸಲಾಗಿದೆ. ಇವುಗಳಿಂದ ಉತ್ಪಾದಿತ ಸಾವಯವ ಗೊಬ್ಬರವನ್ನು ಬಳಸಿ ಶೇ 80ರಷ್ಟು ಸಾವಯವ ಪದ್ಧತಿಯನ್ನು ಅನುಸರಿಸಲಾಗುತ್ತಿದೆ’ ಎನ್ನುತ್ತಾರೆ ಕಲಾವತಿ ಚವನಗೌಡ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.