ADVERTISEMENT

ಜೋಡಿ ವಾದ್ಯ ಕಲಾವಿದ ಸುಂಕಪ್ಪ ದಾಸರ

ಹುಬ್ಬಳ್ಳಿ–ಧಾರವಾಡ ಮೆಟ್ರೊ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 16:12 IST
Last Updated 5 ಆಗಸ್ಟ್ 2019, 16:12 IST
ಜನಪದ ಕಲಾವಿದ ಸುಂಕಪ್ಪ ದಾಸರ
ಜನಪದ ಕಲಾವಿದ ಸುಂಕಪ್ಪ ದಾಸರ   

ಇತ್ತೀಚೆಗೆ ಕಲಘಟಗಿಗೆ ಭೇಟಿ ನೀಡಿದ ಸಂದರ್ಭ. ಕೈಯಲ್ಲಿ ದೊಡ್ಡಕೋಲು ಹಿಡಿದು ಕುಂಟುತ್ತಾ ನಡಿಯುತ್ತಿದ್ದ ವೃದ್ಧರೊಬ್ಬರು ಎದುರಾದರು. ಮಾಸಿದ ಅಂಗಿ-ಧೋತರ, ಮೇಲೊಂದು ಹರಿದ ಕೋಟು, ತಲೆಯ ಮೇಲೊಂದು ಕೆಂಪು ಜರಿಯ ರುಮಾಲು. ನೋಡಿದೊಡನೆ ಥಟ್ಟನೆ ಜನಪದ ಕಲಾವಿದನೆಂದು ಗುರುತಿಸಬಹುದಾದ ಆಕೃತಿ.

ಹೌದು; ಅವರು ಜನಪದ ಕಲಾವಿದ ಸುಂಕಪ್ಪ ದಾಸರ. ಎಪ್ಪತ್ತರ ವಯಸ್ಸಿನ ಈ ಕಲಾವಿದನ ಹಣೆಯ ಮೇಲೆ ಮೂಡಿರುವ ನೆರಿಗೆಗಳು ಕಳೆದು ಹೋದ ಗತವೈಭವದ ಸಾಂಸ್ಕೃತಿಕ ಬದುಕಿಗೆ ಸಾಕ್ಷಿಯೆಂಬಂತೆ ಗೋಚರಿಸಿದವು. ತನ್ನ ಇಳಿವಯಸ್ಸಿನಲ್ಲಿಯೂ ಶ್ರುತಿ-ಸಾದ್ ಜೋಡಿ ವಾದ್ಯಗಳನ್ನು ಹೆಗಲಿಗೆ ನೇತು ಹಾಕಿಕೊಂಡು ಕೈಯಲ್ಲಿ ದೊಡ್ಡ ಕೋಲ್ಹಿಡಿದು ಅದರ ಸಹಾಯದಿಂದ ಮನೆಯಿಂದ ಮನೆಗೆ ತಿರುಗಿ ಮಂಗಳವಾದ್ಯ ನುಡಿಸಿ ಭಿಕ್ಷೆ ಬೇಡಿ ಜೀವನ ಹೊರೆಯುವ ಸಾವಿರಾರು ಕಲಾವಿದರ ಪ್ರತಿನಿಧಿ ಎಂಬಂತೆ ಕಂಡರು.

ಸುಂಕಪ್ಪ ದಾಸರ ಮೂಲತಃ ಕೊಪ್ಪಳ ಜಿಲ್ಲೆಯ ಗಿಣಿಗೇರಾದವರು. ಜೀವನೋಪಾಯಕ್ಕಾಗಿ ಕಲೆಯನ್ನು ಕರಗತ ಮಾಡಿಕೊಂಡು ಊರಿಂದೂರಿಗೆ ಬದುಕು ಅರಿಸುತ್ತ ಕಲಘಟಗಿಗೆ ಬಂದು 15 ವರ್ಷವಾದುದನ್ನು ಸ್ಮರಿಸಿಕೊಂಡರು. ಆದರೆ ತಮ್ಮ ಬದುಕಿಗೆ ಆಸರೆ ಎಂಬುದಿಲ್ಲವೆಂದು ಹೇಳಿ ನಿಟ್ಟಿಸಿರುಬಿಟ್ಟರು.

ADVERTISEMENT

’ಶ್ರುತಿ-ಸಾದ್ ಕಲೆಯನ್ನು ತಮ್ಮ ತಂದೆಯವರಿಂದ ಕಲಿತಕೊಂಡೆ. ನಮ್ಮ ತಂದೆಗೆ ಅದು ಅವರ ತಂದೆಯಿಂದ ಬಳುವಳಿಯಾಗಿ ಬಂದಿದ್ದು. ನಮ್ಮ ಅರೆ ಅಲೆಮಾರಿ ಬದುಕಿಗೆ ಆಸರೆಯಾಗಿ ಬಂದ ಕಲೆ ಇದು. ಆದರೆ ನನ್ನ ಮಕ್ಕಳು ಇದನ್ನು ಕಲಿಯ್ಯಾಕ ಒಲ್ಲೆ ಅಂತಾರ್ರಿ. ನನ್ನ ಅಂತ್ಯದಿಂದ ಇದೂ ಅಂತ್ಯ ಆಗೋದೆ‘ ಎಂದು ಕೈಯಲ್ಲಿದ್ದ ಶ್ರುತಿ-ಸಾದ್ ಜೋಡಿ ಸಂಗೀತ ವಾದ್ಯ ದೃಷ್ಟಿಸಿ ಮತ್ತೆ ನಿಟ್ಟುಸಿರು ಬಿಟ್ಟರು.

‘ಮೂರು ಜನ ಗಂಡು ಮಕ್ಕಳು ಚಿಕ್ಕಪುಟ್ಟ ಪ್ಲಾಸ್ಟಿಕ್ ವಸ್ತುಗಳು ಹಾಗೂ ಗೊಂಬೆ ವ್ಯಾಪಾರ ಮಾಡುತ್ತಿದ್ದು, ಈ ಕಲೆ ಕಲಿಯಲು ಸುತರಾಂ ಒಪ್ಪುತ್ತಿಲ್ಲ. ನಾಲ್ಕೂ ಹೆಣ್ಣು ಮಕ್ಕಳಿಗೆ ಮದುವಿ ಆಗಿದೆ. ಮಕ್ಕಳ ಅಸಡ್ಡೆ ಮತ್ತು ಅನಾದಂಡ ಪ್ರವೃತ್ತಿಯಿಂದಾಗಿ ಈ ಕಲೆ ಅಂತ್ಯ ಕಾಣುವ ಕಾಲಸನ್ನಿಹಿತವಾಗಿದೆ‘ ಎಂದು ಸುರಪ್ಪನವರು ಹೇಳುವಾಗ ಹೌದೆನ್ನಿಸಿತು.

ಗ್ರಾಮೀಣ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗದಂತಿರುವ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಇಂತಹ ಪಾರಂಪರಿಕ ಕಲೆಗಳು ನಶಿಸಿ ಹೋಗುತ್ತಿರುವುದು ದುರದೃಷ್ಟಕರ. ಒಂದು ಕಾಲದಲ್ಲಿ ಗ್ರಾಮೀಣ ಜನರ ಜೀವನ ಶೈಲಿಯೊಂದಿಗೆ ಬೆಸೆದುಕೊಂಡ ಈ ಕಲೆಗಳು ಇಂದು ಅವಸಾನದ ಅಂಚಿನಲ್ಲಿವೆ. ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಬದಲಾಗುತ್ತಿರುವ ಜೀವನಶೈಲಿ ದೆಸೆಯಿಂದ ಹಾಗೂ ಇಂತಹ ಕಲಾವಿದರ ಹೊಸ ತಲೆಮಾರು ಕಲೆಯನ್ನು ಕಲಿಯಲು ತೋರುವ ಅನಾದರ ಮತ್ತು ಅಸಡ್ಡೆಗಳಿಂದ ನಶಿಸಿ ಹೋಗುತ್ತಿರುವುದು ಖೇದಕರ ಸಂಗತಿ.

ನನ್ನ ಕೋರಿಕೆ ಮನ್ನಿಸಿ ಸುಂಕಪ್ಪ ತಮ್ಮ ಇಳಿ ವಯಸ್ಸಿನ ದೆಸೆಯಿಂದ ಏದುಸಿರು ಬಿಡುತ್ತಿದ್ದರೂ ಮಂಗಳಾರತಿ ಪದ, ನಾಗಿನ್ ಸ್ವರ ಹಾಗೂ ಸಂತ ಶಿಶುನಾಳ ಷರೀಫರ ಚೆನ್ನಪ್ಪ ಚೆನ್ನಗೌಡ ಮತ್ತು ಕುಂಬಾರಕಿ ಈಕೀ ಕುಂಬಾರಕಿ... ಹಾಡುಗಳನ್ನು ಜೋಡಿ ವಾದ್ಯಗಳಲ್ಲಿ ಸುಶ್ರಾವ್ಯವಾಗಿ ನುಡಿಸಿದರು. ಶ್ರುತಿ-ಸಾದ್ ಜೋಡಿ ವಾದ್ಯಗಳನ್ನು ನುಡಿಸುವುದು ಅಷ್ಟು ಸುಲಭವಲ್ಲ. ಆದಾಗ್ಯೂ ಅವರು ತಮ್ಮ ಪರಿಶ್ರಮ ಮತ್ತು ಹೊಟ್ಟೆ ಹೊರೆಯುವ ಅನಿವಾರ್ಯತೆಯಿಂದ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ತನ್ನ ದವಡೆಯ ಹಲ್ಲುಗಳೆಲ್ಲವೂ ಉದುರಿ ಹೋಗಿದ್ದರೂ ಉಸಿರು ಬಿಗಿ ಹಿಡಿದು ಎರಡೂ ವಾದ್ಯಗಳನ್ನು ಏಕಕಾಲಕ್ಕೆ ನುಡಿಸುವುದು ಸಂಕಪ್ಪನವರಿಗೆ ಕಷ್ಟಕರವಾದರೂ ರೂಢಿಯಾಗಿಬಿಟ್ಟಿದೆ. ಆದಾಗ್ಯೂ ಇಂತಹ ಕಲೆಗಳನ್ನು ಉಳಿಸಿಕೊಂಡು ಹೋಗಲು ಆಗದಿರುವುದಕ್ಕೆ ಅವರಲ್ಲಿ ನೋವಿದೆ.

*
ಸುಂಕಪ್ಪ ದಾಸರ ಉದಯರಾಗ, ರಾಗಭೈರವಿ, ರಾಗ ಯಮನ್ ಮತ್ತು ರಾಗ ಮಲ್ಹಾರಗಳನ್ನು ನುಡಿಸುತ್ತಾರೆ. ಅಲೆಮಾರಿ ಬದುಕು. ಊರಿಂದೂರಿಗೆ ಹೊಟ್ಟೆ ಹೊರೆಯಲು ತಿರುಗುವ ಅನಿವಾರ್ಯತೆ. ವಾಸವಿರಲು ಮನೆ ಇಲ್ಲ ಜೋಪಡಿಯಲ್ಲೇ ವಾಸ. ಕಲಾವಿದರ ಜೀವನವು ಸಂಕಷ್ಟಮಯವಾಗಿರುವುದಕ್ಕೆ ಇವರೇ ಸಾಕ್ಷಿ.
-ಸದಾಶಿವ ಮರ್ಜಿ, ಆಹಾರ ಇಲಾಖೆ ಹಿರಿಯ ಉಪ ನಿರ್ದೇಶಕ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.