ADVERTISEMENT

ಕನ್ನಡಿಗರ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವ ಮೋದಿ, ಶಾ: ಸುರ್ಜೇವಾಲಾ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 16:05 IST
Last Updated 24 ಏಪ್ರಿಲ್ 2024, 16:05 IST
<div class="paragraphs"><p>ರಣದೀಪಸಿಂಗ್‌ ಸುರ್ಜೇವಾಲಾ</p></div>

ರಣದೀಪಸಿಂಗ್‌ ಸುರ್ಜೇವಾಲಾ

   

ಹುಬ್ಬಳ್ಳಿ: ‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಕೈಹಿಡಿಯಲಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಕರ್ನಾಟಕಕ್ಕೆ ಅನುದಾನ ನೀಡದೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯದ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಆರೋಪಿಸಿದರು.

ನಗರದಲ್ಲಿ ಖಾಸಗಿ ಹೋಟೆಲ್‌ವೊಂದರಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ವರ್ಷ ಮಳೆಯಾಗಲಿಲ್ಲ. ರಾಜ್ಯ ಸರ್ಕಾರ ತಕ್ಷಣ ಬರಗಾಲ ಘೋಷಿಸಿತು. ₹ 18 ಸಾವಿರ ಕೋಟಿ ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿತು. ಆದರೆ, ಮೋದಿ ಸರ್ಕಾರ ಇದುವರೆಗೆ ಒಂದು ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ’ ಎಂದರು.

ADVERTISEMENT

‘ನಾವು ಭಿಕ್ಷೆ ಬೇಡುತ್ತಿಲ್ಲ. ರಾಜ್ಯದ ಜನರು ನೀಡಿದ ತೆರಿಗೆ ಹಣದಲ್ಲಿ ಪಾಲು ಕೇಳುತ್ತಿದ್ದೇವೆ. 15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ₹ 50 ಸಾವಿರ ಕೋಟಿ ತೆರಿಗೆ ಪಾಲನ್ನೂ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯ ₹ 5,300 ಕೋಟಿ ಕೂಡ ಬಂದಿಲ್ಲ. ₹ 100 ತೆರಿಗೆ ನೀಡಿದರೆ ಕೇವಲ ₹ 13 ವಾಪಸ್‌ ಬರುತ್ತಿದೆ. ಕನಿಷ್ಠ ₹ 50 ನೀಡಬೇಕೆಂದರೂ ಕೊಡುತ್ತಿಲ್ಲ. ಮಹದಾಯಿ, ಮೇಕೆದಾಟು ಯೋಜನೆಗಳಿಗೆ ಇದುವರೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ’ ಎಂದು ಆರೋಪಿಸಿದರು.

ಒಡೆದಾಳುವ ನೀತಿ:

ಯೋಜನೆಗಳ ನಕಲು ಮಾಡುವುದು ಹಾಗೂ ಒಡೆದಾಳುವ ನೀತಿ ಬಿಜೆಪಿ ಹಾಗೂ ಮೋದಿ ಡಿಎನ್‌ಎದಲ್ಲಿದೆ. ಈಸ್ಟ್‌ ಇಂಡಿಯಾ ಕಂಪನಿ ರೀತಿಯಲ್ಲಿ ಬಿಜೆಪಿ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದರು.

ಹತ್ತು ವರ್ಷಗಳ ಕಾಲ ಪ್ರಧಾನಿಯಾದ ನಂತರವೂ ಮೋದಿ ಅವರು ಹಿಂದೂ– ಮುಸ್ಲಿಂ ದ್ವೇಷದ ಬಗ್ಗೆ ಮಾತನಾಡುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಪ್ರಧಾನಿಯಾಗಿ ಏನು ಪ್ರಯೋಜನವಾದಂತಾಯಿತು. ಅವರ ಬಳಿ ಅಭಿವೃದ್ಧಿ ಬಗ್ಗೆ ಮಾತನಾಡಲು ಏನೂ ಇಲ್ಲ. ಪ್ರಧಾನಿ ಕಚೇರಿಯ ಗೌರವ, ಪ್ರತಿಷ್ಠೆಯನ್ನು ಅವರು ಕೆಳಮಟ್ಟಕ್ಕೆ ಒಯ್ದರು ಎಂದು ಟೀಕಿಸಿದರು.

ಚರ್ಚೆಗೆ ಬರಲಿ:

‘ರಾಜ್ಯಕ್ಕೆ ಕೇಂದ್ರ ಸರ್ಕಾರ ಮಾಡಿರುವ ತಾರತಮ್ಯದ ಬಗ್ಗೆ ಚರ್ಚಿಸಲು ಮೋದಿ, ಅಮಿತ್‌ ಶಾ ಯಾರಾದರೂ ಬರಲಿ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಸಂತೋಷ ಲಾಡ್‌, ಎಚ್‌.ಕೆ.ಪಾಟೀಲ ಅವರಿಗೆ ತಕ್ಕ ಉತ್ತರ ನೀಡಲು ಸಿದ್ಧರಿದ್ದಾರೆ’ ಎಂದರು.

ಮೀಸಲಾತಿ ಮೇಲೆ ದಾಳಿ:

‘ಕೇಂದ್ರ ಬಿಜೆಪಿ ಸರ್ಕಾರವು ಎಸ್‌.ಸಿ, ಎಸ್‌.ಟಿ ಮೀಸಲಾತಿ ಮೇಲೆ ದಾಳಿ ಮಾಡಿದೆ. ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನಾಗಿ ಖಾಸಗಿ ವ್ಯಕ್ತಿಗಳನ್ನು ನೇಮಿಸುವ ಮೂಲಕ ಆ ಹುದ್ದೆಗಳಿಗೆ ಎಸ್‌.ಸಿ, ಎಸ್‌.ಟಿ ಅಧಿಕಾರಿಗಳು ಬರದಂತೆ ತಡೆದಿದ್ದಾರೆ. ಸರ್ಕಾರಿ ಸ್ವಾಮ್ಯದ 73 ಕಂಪನಿಗಳನ್ನು ಖಾಸಗಿ ಕಂಪನಿಗೆ ಹಸ್ತಾಂತರಿಸಿದೆ. ಇಲ್ಲಿದ್ದ 12 ಲಕ್ಷ ಉದ್ಯೋಗಗಳು ಇಲ್ಲದಂತಾಗಿದೆ. ಇದರಲ್ಲಿ ಎಸ್‌.ಸಿ, ಎಸ್‌.ಟಿ, ಹಿಂದುಳಿದ ವರ್ಗಗಳ ಪಾಲಿನ ಹುದ್ದೆಗಳು ಕಳೆದುಹೋಗಿವೆ’ ಎಂದು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತೇವೆಂದು ಅನಂತಕುಮಾರ ಹೆಗಡೆ ಹೇಳಿದ್ದಾರೆ. ಇದೇ ಮಾತನ್ನು ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್‌ ಗೋಯಲ್‌ ಸೇರಿದಂತೆ ಹಲವು ನಾಯಕರು ಹೇಳಿದ್ದಾರೆ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.