ADVERTISEMENT

ರೈಲ್ವೆ ಪ್ಲಾಟ್‌ಪಾರಂ ಟಿಕೆಟ್ ದರ ₹10 ಹೆಚ್ಚಳ

ಜನದಟ್ಟಣೆ ತಪ್ಪಿಸುವ ರೈಲ್ವೆಯ ತಾತ್ಕಾಲಿಕ ಕ್ರಮಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 5:03 IST
Last Updated 1 ಅಕ್ಟೋಬರ್ 2022, 5:03 IST

ಹುಬ್ಬಳ್ಳಿ: ದಸರಾ ಹಬ್ಬ ಸೇರಿದಂತೆ ರಜಾ ದಿನಗಳಲ್ಲಿ ರೈಲು ನಿಲ್ದಾಣದಲ್ಲಿ ಜನದಟ್ಟಣೆಯನ್ನು ತಗ್ಗಿಸಲು ಮುಂದಾಗಿರುವ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು, ತನ್ನ ವ್ಯಾಪ್ತಿಯ ಹುಬ್ಬಳ್ಳಿ ಮತ್ತು ಬೆಳಗಾವಿ ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಟಿಕೆಟ್ ದರವನ್ನು ತಾತ್ಕಾಲಿಕವಾಗಿ ₹10 ಹೆಚ್ಚಳ ಮಾಡಿದೆ.

ಪರಿಷ್ಕೃತ ದರವು ಅ. 2ರಿಂದ 10ರವರೆಗೆ ಜಾರಿಯಲ್ಲಿರಲಿದೆ. ಇದರೊಂದಿಗೆ ಪ್ಲಾಟ್‌ಫಾರಂ ಟಿಕೆಟ್ ದರವು ₹20ಕ್ಕೆ ಏರಿಕೆಯಾಗಿದೆ. ರೈಲ್ವೆ ಪ್ರಯಾಣಿಕರಿಗೆ ಪ್ಲಾಟ್‌ಫಾರಂಗಳಲ್ಲಿ ಓಡಾಟಕ್ಕೆ ಮುಕ್ತ ಅವಕಾಶ ಮಾಡಿಕೊಡಲು ಟಿಕೆಟ್ ದರವನ್ನು ತಾತ್ಕಾಲಿಕವಾಗಿ ಹೆಚ್ಚಿಸಲಾಗಿದೆ ಎಂದು ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ.

ತಮ್ಮ ಕುಟುಂಬದವರು ಹಾಗೂ ಪ್ರೀತಿ–ಪಾತ್ರರಿಗೆ ವಿದಾಯ ಹೇಳಲು ನಿಲ್ದಾಣಕ್ಕೆ ಬರುವವರ ಜೇಬಿಗೆ ಹೆಚ್ಚುವರಿಯಾಗಿ ₹10 ಕತ್ತರಿ ಹಾಕುವ ರೈಲ್ವೆಯ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ.

ADVERTISEMENT

ತಕ್ಷಣ ಹಿಂಪಡೆಯಲಿ: ‘ಪ್ರಯಾಣಿಕರು ಅಥವಾ ಜನರು ರೈಲು ನಿಲ್ದಾಣಕ್ಕೆ ಹೆಚ್ಚಾಗಿ ಬಂದರೆ ರೈಲ್ವೆಯ ಆದಾಯ ಹೆಚ್ಚಲಿದೆ. ಅಂತಹ ಸಂದರ್ಭದಲ್ಲಿ ದರ ಹೆಚ್ಚಿಸುವ ಬದಲು ಕಡಿಮೆ ಮಾಡಬೇಕು. ನೈರುತ್ಯ ರೈಲ್ವೆಯವರು ಕೈಗೊಂಡಿರುವ ಈ ತಪ್ಪು ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು’ ಎಂದು ರಾಜ್ಯ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಬಿ.ಎ. ಪಾಟೀಲ ಆಗ್ರಹಿಸಿದ್ದಾರೆ.

‘ಕೇವಲ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಮನಬಂದಂತೆ ಪ್ಲಾಟ್‌ಫಾರಂ ಟಿಕೆಟ್ ದರವನ್ನು ಯಾವ ಆಧಾರದಲ್ಲಿ ಹೆಚ್ಚಿಸಿದ್ದಾರೆ? ಇಡೀ ಭಾರತಕ್ಕೆ ಒಂದು ನಿಯಮವಾದರೆ, ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗಕ್ಕೆ ಬೇರೆ ನಿಯಮವಿದೆಯೇ? ಎಂದು ಹುಬ್ಬಳ್ಳಿಯ ಸಿಟಿಜನ್ ಫೋರಂನ ಬಿ.ಎಂ. ಶಾನಭಾಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪ್ಲಾಟ್‌ಫಾರಂ ಟಿಕೆಟ್ ದರ ಹೆಚ್ಚಳವು, ಬಡ ಮತ್ತು ಮಧ್ಯಮವರ್ಗದವರನ್ನು ಸುಲಿಗೆ ಮಾಡುವ ಗಬ್ಬರ್ ಸಿಂಗ್ ತೆರಿಗೆಯಂತಿದೆ. ದರವನ್ನು ತಗ್ಗಿಸಬೇಕೇ ಹೊರತು ಹೆಚ್ಚಿಸಬಾರದು’ ಎಂದು ಸಮತಾ ಸೇನಾದ ಗುರುನಾಥ ಉಳ್ಳಿಕಾಶಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.