ಹುಬ್ಬಳ್ಳಿ: ‘ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಸರ್ಕಾರದ ಯೋಜನೆಗಳಿಂದ ಯಾರೂ ವಂಚಿತರಾಗದಂತೆ ಕ್ರಮ ವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳರ ಹೇಳಿದರು.
ಇಲ್ಲಿನ ತಾಲ್ಲೂಕು ಆಡಳಿತಸೌಧದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
‘ಶಿಕ್ಷಣ, ಆರೋಗ್ಯ, ಕೃಷಿ, ಕುಡಿಯುವ ನೀರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಆದ್ಯತೆ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿದೆ. ಸಮವಸ್ತ್ರ, ಉಚಿತ ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟದಂತಹ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಹೀಗಾಗಿ ದಾಖಲಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
‘ಮಳೆಗಾಲ ಆರಂಭವಾಗುವ ಮುನ್ನ ಶಾಲಾ ಕೊಠಡಿಗಳು, ಶೌಚಾಲಯಗಳನ್ನು ದುರಸ್ತಿ ಮಾಡಬೇಕು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.
ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರತಿಕ್ರಿಯಿಸಿ, ‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ‘ನಮ್ಮ ಶಾಲೆ ನಮ್ಮ ಹೆಮ್ಮೆ’ ಅಭಿಯಾನ ನಡೆಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿರುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿದರೂ ಪಾಲಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಾರೆ’ ಎಂದು ತಿಳಿಸಿದರು.
‘ಅದರಗುಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ಕೊಠಡಿ ನಿರ್ಮಿಸಲು ಅವಕಾಶ ಕೊಡುತ್ತಿಲ್ಲ. ಇಂಗಳಹಳ್ಳಿಯಲ್ಲಿ ಕೇಂದ್ರದ ಕಾಂಪೌಂಡ್ ನಿರ್ಮಿಸಲು ಪಂಚಾಯಿತಿ ಸದಸ್ಯರು ಸಮಸ್ಯೆ ಮಾಡುತ್ತಿದ್ದಾರೆ’ ಎಂದು ಕೆಆರ್‌ಐಡಿಎಲ್ ಅಧಿಕಾರಿ ತಿಳಿಸಿದರು.
ದೀಪಕ್ ಮಡಿವಾಳ ಮಾತನಾಡಿ, ‘ವೈದ್ಯರು ಮತ್ತು ಪಿಡಿಒ ಅವರ ಸಹಕಾರ ಪಡೆದು ಮರಣೋತ್ತರ ಪರೀಕ್ಷೆ ಕೊಠಡಿ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
ಹುಬ್ಬಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು ಹಾಜರಿದ್ದರು.
‘ನೀರಿನ ಪೈಪ್‌ನಲ್ಲಿ ಸೋರಿಕೆ ತಡೆಗಟ್ಟಿ’
‘ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಅನುಷ್ಠಾನ ಮಾಡಲಾಗುತ್ತಿರುವ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಸುಳ್ಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪೈಪ್‌ಗಳಲ್ಲಿ ಸೋರಿಕೆ ಕಂಡು ಬರುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ’ ಎಂದು ದೀಪಕ್ ಮಡಿವಾಳರ ಹೇಳಿದರು. ‘ಕೆಲವೆಡೆ ಕಳಪೆ ಗುಣಮಟ್ಟದ ನಳ ಅಳವಡಿಸಲಾಗಿದೆ. ಮನೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಪೈಪ್ ಅಳವಡಿಸಿದ ನಂತರ ನೀರು ಸರಿಯಾಗಿ ಪೂರೈಕೆಯಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ಸೋರಿಕೆ ತಡೆಗಟ್ಟಬೇಕು. ಕಾಮಗಾರಿ ಸಮಪರ್ಕವಾಗಿ ಅನುಷ್ಠಾನವಾದ ನಂತರವಷ್ಟೇ ಪಂಚಾಯಿತಿಗೆ ಹಸ್ತಾಂತರ ಮಾಡಿಕೊಳ್ಳಲಾಗುವುದು’ ಎಂದು ಹೇಳಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್ ಪ್ರತಿಕ್ರಿಯಿಸಿ ‘ನೀರು ಸೋರಿಕೆ ತಡೆಗಟ್ಟಲಾಗುವುದು. ದೂರುಗಳು ಬಂದ ಕಡೆ ಸ್ಥಳ ಪರಿಶೀಲನೆ ನಡೆಸಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.