ADVERTISEMENT

‘ಟೆಕ್ನೋ ಕಾನ್‌ಕ್ಲೇವ್ –2020’ ನಾಳೆ

ಐದು ಜಿಲ್ಲೆಗಳ 500 ಮಂದಿ ಭಾಗವಹಿಸುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 20:15 IST
Last Updated 20 ಫೆಬ್ರುವರಿ 2020, 20:15 IST

ಹುಬ್ಬಳ್ಳಿ: ‘ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ ಬಿಸಿಎ ಮಹಾವಿದ್ಯಾಲಯವು ಫೆ. 22ರಂದು ಬೆಳಿಗ್ಗೆ 10ಕ್ಕೆ ‘ಟೆಕ್ನೋ ಕಾನ್‌ಕ್ಲೇವ್–2020’ ವಿಚಾರ ಸಂಕಿರಣವನ್ನು, ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಬಿ.ಟಿ (ಬಯೋಟೆಕ್) ಸಭಾಂಗಣದಲ್ಲಿ ಆಯೋಜಿಸಿದೆ.

‘ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಹಾಗೂ ಅವಕಾಶಗಳ ಕುರಿತು ವಿಚಾರ ಸಂಕಿರಣದಲ್ಲಿ ಭರಪೂರ ಮಾಹಿತಿ ಸಿಗಲಿದೆ. ಬಿಗ್‌ ಡೇಟಾ, ಐಒಟಿ, ಸೈಬರ್ ಸುರಕ್ಷತೆ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಕ್ಲಿನಿಕ್ ವಿಷಯಗಳ ಕುರಿತು ವಿವಿಧ ಕ್ಷೇತ್ರಗಳ ತಜ್ಞರು ವಿಚಾರ ಸಂಕಿರಣದಲ್ಲಿ ಮಾತನಾಡಲಿದ್ದಾರೆ’ ಎಂದು ಜಾಬಿನ ಕಾಲೇಜಿನ ಪ್ರಾಚಾರ್ಯೆ ಜ್ಯೋತಿ ಮಾನೇದ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಉತ್ತರ ಕರ್ನಾಟಕದಲ್ಲಿ, ಅದೂ ನಮ್ಮ ಕಾಲೇಜಿನಲ್ಲಿ ಮೊದಲ ಸಲ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಉತ್ತರ ಕನ್ನಡ ಹಾಗೂ ದಾವಣಗೆರೆ ಜಿಲ್ಲೆಗಳ ಬಿಸಿಎ, ಬಿ.ಎಸ್ಸಿ, ಬಿ.ಇ, ಡಿಪ್ಲೊಮಾ, ಎನ್‌ಟಿಟಿಎಫ್‌ ಹಾಗೂ ಐ.ಟಿ ಸಂಬಂಧಿತ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ, ಅಂದಾಜು 500 ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಹೇಳಿದರು.

ADVERTISEMENT

ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಪ್ರೊ. ಸಿದ್ಧಲಿಂಗಪ್ಪ ಕಡಕೋಳ ಮಾತನಾಡಿ, ‘ಬೆಂಗಳೂರಿನ ಗ್ಲೋಬಲ್ ಎಡ್ಜ್ ಸಾಫ್ಟ್‌ವೇರ್ ಲಿಮಿಟೆಡ್‌ ಸಂಸ್ಥೆಯ ಉಪಾಧ್ಯಕ್ಷ ನಾಗನಗೌಡ ಜಕ್ಕನಗೌಡ್ರ ಬೆಳಿಗ್ಗೆ 10ಕ್ಕೆ ವಿಚಾರ ಸಂಕಿರಣ ಉದ್ಘಾಟಿಸಿ, ‘ಫ್ಯೂಚರ್ ಆಫ್ ವರ್ಕ್ ಅಂಡ್ ರೋಲ್ ಆಫ್ ಯಂಗ್ ಇಂಡಿಯಾ’ ಕುರಿತು ವಿಷಯ ಮಂಡಿಸಲಿದ್ದಾರೆ. ಕೇಂಬ್ರಿಜ್ ತಾಂತ್ರಿಕ ಸಂಸ್ಥೆಯ ನಿರ್ದೇಶಕ ಡಾ.ಡಿ.ಎಚ್. ರಾವ್ ಅವರು ‘ಡಿಜಿಟಲ್ ಕ್ಲಿನಿಕ್’ ಕುರಿತು, ಮೊ ಎಂಗೇಜ್ ಕಂಪನಿ ವ್ಯವಸ್ಥಾಪಕ ಜೀತೆಂದ್ರ ಪನಿಹಾರ ಅವರು ‘ಎಂಪ್ಲಾಯೆಬಿಲಿಟಿ ಸ್ಕಿಲ್ಸ್’ ಕುರಿತು ಮಾತನಾಡಲಿದ್ದಾರೆ’ ಎಂದರು.

‘ಆಕ್ಸೆಂಚರ್ ಕಂಪನಿಯ ಮಹೇಶ ನಾರಾಯಣ ಅವರು ‘ಕೃತಕ ಬುದ್ಧಿಮತ್ತೆ’ ಕುರಿತು ಹಾಗೂ ವಿಪ್ರೊ ಕಂಪನಿಯ ಟ್ಯಾಲೆಂಟ್ ಪಾರ್ಟ್‌ನರ್ ಭವೇಶ ಪಟೇಲ ಅವರು ‘ಎಂಪ್ಲಾಯೆಬಿಲಿಟಿ ಇನ್ ಟೈಮ್ಸ್ ಆಫ್ ಡಿಸ್ರಪ್ಷನ್’ ಕುರಿತು ಹಾಗೂ ಐಸಿಟಿ ಅಕಾಡೆಮಿಯ ಕರ್ನಾಟಕದ ಮುಖ್ಯಸ್ಥ ವಿಷ್ಣುಪ್ರಸಾದ ಡಿ. ಅವರು ‘ಇಂಡಸ್ಟ್ರಿ 4.0’ ಕುರಿತು ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಜ್ಯೋತಿ ಮಾನೇದ ವಹಿಸಲಿದ್ದಾರೆ. ವಿಚಾರ ಸಂಕಿರಣದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ನೋಂದಣಿ ಶುಲ್ಕ ₹200, ಸಿಬ್ಬಂದಿಗೆ ₹500 ಹಾಗೂ ಇತರರಿಗೆ ₹1 ಸಾವಿರ ನಿಗದಿಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಕಾಲೇಜಿನ ಪ್ರೊ. ವಂದನಾ ಸುನಾಗ ಮತ್ತು ಗ್ರಂಥಪಾಲಕ ಬಿ.ಎಸ್. ಮಾಳವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.