ADVERTISEMENT

ಸೆಮಿಫೈನಲ್‌ಗೆ ತೇಜಲ್‌, ಕೋಲ್ಟ್ಸ್‌

ಕ್ರಿಕೆಟ್‌: 44 ಎಸೆತಗಳಲ್ಲಿ 98 ರನ್‌ ಗಳಿಸಿದ ಅಸಲಕರ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 3:51 IST
Last Updated 19 ಡಿಸೆಂಬರ್ 2020, 3:51 IST
ಸಿದ್ದೇಶ ಅಸಲಕರ
ಸಿದ್ದೇಶ ಅಸಲಕರ   

ಹುಬ್ಬಳ್ಳಿ: ಅಲ್ಪ ಮೊತ್ತದ ಗುರಿಯನ್ನು ಸುಲಭವಾಗಿ ಮುಟ್ಟಿದ ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿ ತಂಡ ’ಸ್ಕೈ 360’ ಸಲ್ಯೂಷನ್‌ 14 ವರ್ಷದೊಳಗಿನವರ ಅಂತರ ಕ್ಯಾಂಪ್‌ಗಳ ಕ್ರಿಕೆಟ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ.

ಫಸ್ಟ್‌ ಕ್ರಿಕೆಟ್ ಅಕಾಡೆಮಿ ಜಿಮ್ಖಾನಾ ಮೈದಾನದಲ್ಲಿ ಆಯೋಜಿಸಿರುವ ಟೂರ್ನಿಯಲ್ಲಿ ಶುಕ್ರವಾರ ನಡೆದ ಕೊನೆಯ ಲೀಗ್‌ ಪಂದ್ಯದಲ್ಲಿ ತೇಜಲ್‌ ಅಕಾಡೆಮಿ 9 ವಿಕೆಟ್‌ಗಳ ಗೆಲುವು ದಾಖಲಿಸಿತು. ಮೊದಲು ಬ್ಯಾಟ್‌ ಮಾಡಿದ ಗದುಗಿನ ಜನೊಪಂಥರ್‌ ಅಕಾಡೆಮಿ 24.5 ಓವರ್‌ಗಳಲ್ಲಿ 57 ರನ್‌ ಕಲೆಹಾಕಿ ಆಲೌಟ್‌ ಆಯಿತು. ಈ ಗುರಿಯನ್ನು ತೇಜಲ್‌ 8.5 ಓವರ್‌ಗಳಲ್ಲಿ ತಲುಪಿ ನಾಕೌಟ್‌ನಲ್ಲಿ ಸ್ಥಾನ ಭದ್ರಪಡಿಸಿಕೊಂಡಿತು.

ದಿನದ ಇನ್ನೊಂದು ಪಂದ್ಯದಲ್ಲಿ ಬೆಳಗಾವಿಯ ಆನಂದ್‌ ಅಕಾಡೆಮಿ 301 ರನ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಆನಂದ್‌ ಅಕಾಡೆಮಿ ತಂಡ 30 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 361 ರನ್‌ ಕಲೆಹಾಕಿತು. ಸಿದ್ದೇಶ ಅಸಲಕರ (98, 44ಎಸೆತ, 14ಬೌಂಡರಿ, 5 ಸಿಕ್ಸರ್‌), ಅದ್ದಿ ನಲವಡೆ (54), ಅದ್ವಿತ್‌ ಸತ್ಯ (40) ಮತ್ತು ಓಂ ಜಕಾತಿ (ಔಟಾಗದೆ 68) ಅಬ್ಬರದ ಬ್ಯಾಟಿಂಗ್‌ ಇದಕ್ಕೆ ಕಾರಣವಾಯಿತು. ಎದುರಾಳಿ ಚೈತನ್ಯ ಸ್ಪೋರ್ಟ್ಸ್ ಫೌಂಡೇಷನ್‌ 15.2 ಓವರ್‌ಗಳಲ್ಲಿ 60 ರನ್‌ ಗಳಿಸಲಷ್ಟೇ ಶಕ್ತವಾಯಿತು.

ADVERTISEMENT

ಶನಿವಾರ ಬೆಳಿಗ್ಗೆ 8.30ಕ್ಕೆ ನಡೆಯುವ ಮೊದಲ ಸೆಮಿಫೈನಲ್‌ನಲ್ಲಿ ಹುಬ್ಬಳ್ಳಿ ಕೋಲ್ಟ್ಸ್‌–ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ, ಮಧ್ಯಾಹ್ನ 1.30ಕ್ಕೆ ತೇಜಲ್‌ ಅಕಾಡೆಮಿ–ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ತಂಡಗಳು ಹಣಾಹಣಿ ನಡೆಸಲಿವೆ. ಈ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ತಂಡಗಳು ಭಾನುವಾರ ಪ್ರಶಸ್ತಿಗಾಗಿ ಹೋರಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.